ADVERTISEMENT

ಚಿಕ್ಕಮಗಳೂರು | ವೈದ್ಯಕೀಯ ಕಾಲೇಜು: ಆಗಸ್ಟ್‌ನಿಂದ ಹೊಸ ಕಟ್ಟಡದಲ್ಲೇ ತರಗತಿ

ಶೇ 67.24ರಷ್ಟು ಸಿವಿಲ್ ಕಾಮಗಾರಿ ಪೂರ್ಣ: ಅಗತ್ಯದಷ್ಟು ಕೊಠಡಿ ಲಭ್ಯವಾಗುವ ವಿಶ್ವಾಸದಲ್ಲಿ ಅಧಿಕಾರಿಗಳು

ಪ್ರಜಾವಾಣಿ ವಿಶೇಷ
Published 24 ಜೂನ್ 2023, 6:50 IST
Last Updated 24 ಜೂನ್ 2023, 6:50 IST
ತೇಗೂರು ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು –ಪ್ರಜಾವಾಣಿ ಚಿತ್ರ/ಎ.ಎನ್.ಮೂರ್ತಿ
ತೇಗೂರು ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜು –ಪ್ರಜಾವಾಣಿ ಚಿತ್ರ/ಎ.ಎನ್.ಮೂರ್ತಿ   

ವಿಜಯಕುಮಾರ್ ಎಸ್.ಕೆ.

ಚಿಕ್ಕಮಗಳೂರು: ತಾತ್ಕಾಲಿಕ ಕಟ್ಟಡದಲ್ಲಿ ನಡೆಯುತ್ತಿರುವ ವೈದ್ಯಕೀಯ ಕಾಲೇಜಿನ ತರಗತಿಗಳನ್ನು ಬರಲಿರುವ ಶೈಕ್ಷಣಿಕ ವರ್ಷದಿಂದ ನಗರದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಶಾಶ್ವತ ಕಟ್ಟಡಕ್ಕೆ ಸ್ಥಳಾಂತರಿಸಲು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ತರಗತಿ ಆರಂಭಿಸಲು ಬೇಕಾಗುವಷ್ಟು ಕೊಠಡಿಗಳು ಇನ್ನೆರಡು ತಿಂಗಳಲ್ಲಿ ಲಭ್ಯವಾಗುವ ವಿಶ್ವಾಸದಲ್ಲಿದ್ದಾರೆ.

ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿಗೆ ರಾಜ್ಯ ಸರ್ಕಾರ 2020ರಲ್ಲಿ ಅನುಮೋದನೆ ನೀಡಿದ್ದು, ನಗರದ ಹೊರ ವಲಯದ ತೇಗೂರು ಗ್ರಾಮದ ಬಳಿ 40 ಎಕರೆ 11 ಗುಂಟೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೇಂದ್ರ ಸರ್ಕಾರದ ಶೇ 60ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರದ ಶೇ 40ರಷ್ಟು ಅನುದಾನ ಹಂಚಿಕೆಯಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ.

ADVERTISEMENT

2022–23ನೇ ಸಾಲಿನಿಂದ 150 ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದ್ದು, ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳು ಆರಂಭವಾಗಿವೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಕರ್ಯ ಕಲ್ಪಿಸಲಾಗಿದೆ.

ಇದೇ ಆಗಸ್ಟ್‌ನಲ್ಲಿ ಎರಡನೇ ವರ್ಷದ ತರಗತಿಗಳು ಆರಂಭವಾಗಬೇಕಿದ್ದು, ಪ್ರಥಮ ವರ್ಷದ ಎಂಬಿಬಿಎಸ್‌ಗೆ ಹೊಸದಾಗಿ 150 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ಮುಂದುವರಿಸಲು ಸಾಧ್ಯವಿಲ್ಲ. ಆದ್ದರಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕಿದೆ.

2020ರ ನವೆಂಬರ್ 23ರಂದೇ ಬಾಲಾಜಿ ಕೃಪಾ ಪ್ರೋಜೆಕ್ಟ್ಸ್ ಕಂಪನಿಗೆ ಗುತ್ತಿಗೆ ವಹಿಸಲಾಗಿದ್ದು, 2021ರ ಜನವರಿ 15ರಿಂದ ಕಾಮಗಾರಿ ಆರಂಭವಾಗಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದು, ಅದರಂತೆ 2023ರ ಜನವರಿ 14ರಂದೇ ಕಟ್ಟಡವನ್ನು ಹಸ್ತಾಂತರ ಮಾಡಬೇಕಿತ್ತು. ಸದ್ಯ ಶೇ 67.24ರಷ್ಟು ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗೆ 2023ರ ಡಿಸೆಂಬರ್ ತನಕ ಗಡುವು ವಿಸ್ತರಿಸಲಾಗಿದೆ.

‘ಮೊದಲ ಎರಡು ವರ್ಷದ ವಿದ್ಯಾರ್ಥಿಗಳ ತರಗತಿ ನಡೆಸಲು ಅಗತ್ಯ ಇರುವ ಕೊಠಡಿ ಮತ್ತು ಸೌಕರ್ಯಗಳನ್ನು ಆಗಸ್ಟ್‌ ವೇಳೆಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. 300 ವಿದ್ಯಾರ್ಥಿಗಳಿಗೆ ಬೇಕಾಗುವಷ್ಟು ವಿದ್ಯಾರ್ಥಿ ನಿಲಯವನ್ನೂ ಬಿಟ್ಟುಕೊಡಲು ತಿಳಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್‌ಕುಮಾರ್ ತಿಳಿಸಿದರು.

‘ಸಿವಿಲ್ ಕಾಮಗಾರಿ ಶೇ 67.24ರಷ್ಟು ಪೂರ್ಣಗೊಂಡಿರುವುದರಿಂದ ಅಗತ್ಯ ಇರುವಷ್ಟು ಬಾಕಿ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಹೊಸ ಕಟ್ಟಡದಲ್ಲೇ ತರಗತಿ ಆರಂಭಿಸಬೇಕಾದ ಅನಿವಾರ್ಯತೆಯೂ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಅಂಕಿ–ಅಂಶ ₹325 ಕೋಟಿಮೆಡಿಕಲ್ ಕಾಲೇಜು ನಿರ್ಮಾಣದ ಯೋಜನಾ ಮೊತ್ತ ₹195 ಕೋಟಿಕೇಂದ್ರ ಸರ್ಕಾರ ಪಾಲು ₹130 ಕೋಟಿರಾಜ್ಯ ಸರ್ಕಾರದ ಪಾಲು ಶೇ 67.24ಸಿವಿಲ್‌ ಕಾಮಗಾರಿ ಪೂರ್ಣಗೊಂಡಿರುವುದು 2023ರ ಡಿಸೆಂಬರ್ 31ಕಾಮಗಾರಿ ಪೂರ್ಣಗೊಳಿಸಲು ನೀಡಿರುವ ಅಂತಿಮ ಗಡುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.