ಚಿಕ್ಕಮಗಳೂರು: ಜಲಜೀವನ್ ಮಿಷನ್(ಜೆಜೆಎಂ) ಕಾಮಗಾರಿಯ ಪ್ರಗತಿ, ಕಳಪೆ ಕಾಮಗಾರಿ ಸಂಬಂಧ ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಕೆ.ಜೆ. ಜಾರ್ಜ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜೆಜೆಎಂ ಕಾಮಗಾರಿ ಸಂಬಂಧ ಸಾಕಷ್ಟು ದೂರುಗಳು ಬರುತ್ತಿವೆ. ನೀರಿನ ಮೂಲ ಗುರುತಿಸದೆ ಕಾಮಗಾರಿ ಮಾಡಿದ್ದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಸಮಿತಿ ರಚಿಸಿ ಪರಿಶೀಲನೆ ನಡೆಸುವಂತೆ’ ತಿಳಿಸಿದರು.
ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ‘ನೀರಿನ ಮೂಲ ಗುರುತಿಸದ ಕಾಮಗಾರಿಗೆ ಅನುಮೋದನೆ ನೀಡಬಾರದು ಎಂದು ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಇದರ ನಡುವೆಯೂ ಗುತ್ತಿಗೆದಾರನಿಗೆ ಅನುಕೂಲ ಮಾಡಲು ಅನುಮೋದನೆ ನೀಡಿದ್ದರೆ ಅದು ಅಕ್ಷಮ್ಯ. ಇದಕ್ಕೆ ಅಧಿಕಾರಿಗಳೇ ಹೊಣೆ’ ಎಂದರು.
ಶಾಸಕ ಎಚ್.ಡಿ. ತಮ್ಮಯ್ಯ ಕೂಡ ಇದಕ್ಕೆ ಧ್ವನಿಗೂಡಿಸಿ, ‘ನೀರಿನ ಮೂಲ ಗುರುತಿಸದ ಎಲ್ಲೂ ಕಾಮಗಾರಿಯನ್ನೂ ತಡೆ ಹಿಡಿಯಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ‘ಪ್ರತಿಯೊಂದ ಕಾಮಗಾರಿಯನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಕಾಮಗಾರಿ ಆರಂಭಿಸದ 60 ಕಡೆಗಳಲ್ಲಿ ನೀರಿನ ಮೂಲ ಗುರುತಿಸಿದ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಗ್ರಾಮೀಣ ಭಾಗಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಿಂಗಲ್ ರೂಟ್‌ಗಳನ್ನು ಏಕಾಏಕಿ ನಿಲ್ಲಿಸಲಾಗುತ್ತಿದೆ. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಜನ ಪರದಾಡುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಮ್ಯಾಕಾನಿಕ್ ಇಲ್ಲ, ಬಸ್ ಕೆಟ್ಟುಹೋಗಿದೆ ಎಂದು ಉತ್ತರವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಕೆಎಸ್‌ಆರ್‌ಟಿಸಿ ಡಿಟಿಒ ಪ್ರದೀಪ್ ಮಾತನಾಡಿ, ‘ಒಂದೆರೆಡು ದಿನ ಸಮಸ್ಯೆಯಾಗಿತ್ತು. ಈಗ ಬಗೆಹರಿದಿದೆ ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ಮಲೆನಾಡು ಭಾಗದ ಕೊನೆಯ ಗ್ರಾಮಗಳಿಗೆ ತೆರಳುವ ಬಸ್‌ಗಳನ್ನು ಏಕಾಏಕಿ ನಿಲ್ಲಿಸಲಾಗುತ್ತಿದೆ. ಕೂಡಲೇ ಸರಿಪಡಿಸಬೇಕು’ ಎಂದು ತಿಳಿಸಿದರು.
‘ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಾಸುವೆ ಸೇರಿ ಎಣ್ಣೆಕಾಳು ಬೆಳೆಯುವುದನ್ನೂ ರೈತರು ನಿಲ್ಲಿಸಿದ್ದಾರೆ. ಮಾರಾಟವಾಗಿರುವ ಬಿತ್ತನೆ ಬೀಜ ಆಧರಿಸಿ ಬಿತ್ತನೆ ಪ್ರಮಾಣವನ್ನು ನಿಗದಿ ಮಾಡುವುದು ಸರಿಯಲ್ಲ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ನಿಖರ ಮಾಹಿತಿ ಸಂಗ್ರಹಿಸಬೇಕು’ ಎಂದು ಎಸ್.ಎಲ್.ಭೋಜೇಗೌಡ ಹೇಳಿದರು.
‘ಆನೆ ಬಿಡಾರ ತ್ವರಿತವಾಗಿ ಬೇಕು’
‘ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ತಿಂಗಳುಗಟ್ಟಲೆ ಒಂದೇ ಜಾಗದಲ್ಲಿ ಆನೆಗಳು ಬೀಡು ಬಿಟ್ಟಿವೆ. ಆನೆ ಸ್ಥಳಾಂತರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಿ.ಟಿ. ರವಿ ಪ್ರಶ್ನಿಸಿದರು. ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಆನೆಗಳು ಜನವಸತಿ ಪ್ರದೇಶಕ್ಕೆ ದಾಳಿ ನಡೆಸುತ್ತಿದ್ದು ಪ್ರಾಣ ಹಾನಿಯೂ ಸಂಭವಿಸಿದೆ. ಇದರಲ್ಲಿ ಎರಡು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಇನ್ನುಳಿದ ಮೂರು ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲಾಗಿದೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ ‘ಭದ್ರಾ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಆನೆ ಸಾಫ್ಟ್ ರಿಲೀಸ್ ಕೇಂದ್ರ ತೆರೆಯಲು 200 ಎಕರೆ ಗುರುತಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಜತೆಗೆ ಬಾಳೆಹೊನ್ನೂರು–ಕಳಸ ನಡುವಿನ ತನೂಡಿ ಬಳಿ ಆನೆ ಬಿಡಾರ ತೆರೆಯಲು ಚಿಂತನೆ ನಡೆಸಲಾಗಿತ್ತು. ಈಗ ಬೇರೆ ಜಾಗಕ್ಕೆ ಹುಡುಕಾಟ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಈ ಎರಡೂ ಯೋಜನೆ ತ್ವರಿತವಾಗಿ ಜಾರಿಯಾದರೆ ಆನೆ ಹಾವಳಿ ತಡೆಗಟ್ಟಲು ಸಹಾಯವಾಗುತ್ತದೆ’ ಎಂದರು. ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ ‘ಆನೆ ದಾಳಿಯಾದ ಕೂಡಲೇ ಪ್ರತಿಭಟನೆ ನಡೆಸುವುದು ಬಿಜೆಪಿಯವರು. ಕೇಂದ್ರ ಸರ್ಕಾರದ ಗಮನ ಸೆಳೆದು ಶಾಶ್ವತ ಪರಿಹಾರಕ್ಕೆ ನೀವು ಪ್ರಯತ್ನಿಸಬೇಕಲ್ಲವೇ’ ಎಂದು ಸಿ.ಟಿ.ರವಿ ಅವರಿಗೆ ಪ್ರಶ್ನಿಸಿದರು. ‘ನೀವು ಸರ್ವಪಕ್ಷ ನಿಯೋಗ ಹೋಗೋಣ ಎಂದು ನಮ್ಮನ್ನು ಕರೆದಿದ್ದೀರಾ’ ಎಂದು ಸಿ.ಟಿ.ರವಿ ಮರು ಪ್ರಶ್ನೆ ಹಾಕಿದರು. ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್ ‘ಈ ಬಗ್ಗೆ ಬೆಂಗಳೂರಿನಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಉನ್ನತ ಮಟ್ಟದ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ’ ಎಂದರು.
‘ಪ್ಲಾಸಿಕ್ ಬಳಕೆಗೆ ಕಡಿವಾಣ ಹಾಕಿ’
‘ಗಿರಿಭಾಗದ ಹೋಂಸ್ಟೆ ಮತ್ತು ರೆಸಾರ್ಟ್‌ಗಳಲ್ಲಿ ಕುಡಿಯುವ ನೀರಿ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು. ‘ಕೈಮರ ಚೆಕ್‌ಪೋಸ್ಟ್ ಬಳಿ ಪ್ರವಾಸಿಗರ ವಾಹನ ತಪಾಸಣೆ ನಡೆಸಿ ನೀರಿನ ಬಾಟಲಿ ಮದ್ಯದ ಬಾಟಲಿ ಕಸಿದುಕೊಳ್ಳಲಾಗುತ್ತಿದೆ. ಹೋಂಸ್ಟೆ ಮತ್ತು ರೆಸಾರ್ಟ್‌ಗಳಿಗೂ ಈ ರೀತಿಯ ನಿಯಂತ್ರಣ ಬೇಡವೆ’ ಎಂದು ಪ್ರಶ್ನಿಸಿದರು. ನಗರದಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆಯಾಗುತ್ತಿದೆ. ಇದಕ್ಕೂ ನಿಯಂತ್ರಣ ಹೇರಬೇಕು ಎಂದರು. ಈ ವೇಳೆ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ ಪ್ರವಾಸಿ ತಾಣಗಳಲ್ಲದೆ ಕಲ್ಯಾಣ ಮಂಟಪ ಹೊಟೇಲ್‌ಗಳಲ್ಲೂ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಬೇಕು ಎಂದರು. ಕಲ್ಯಾಣ ಮಂಟಪಗಳ ಮಾಲೀಕರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.