ADVERTISEMENT

ಚಿಕ್ಕಮಗಳೂರು | ಮಣ್ಣಿನ ಫಲವತ್ತತೆಗೆ ನ್ಯಾನೊ ಯೂರಿಯಾ ಬಳಸಿ: ಕೃಷಿ ಇಲಾಖೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 3:14 IST
Last Updated 29 ಆಗಸ್ಟ್ 2025, 3:14 IST
ಕಡೂರು ತಾಲ್ಲೂಕಿನ ಸರಸ್ವತಿಪುರ ಗೇಟ್ ಬಳಿಯ ರಾಗಿ ಹೊಲದಲ್ಲಿ ಕೃಷಿ ಇಲಾಖೆಯಿಂದ ಪ್ರಾತ್ಯಕ್ಷಿಕೆಯ ಮೂಲಕ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆಯ ಬಗ್ಗೆ  ರೈತರಿಗೆ ಅರಿವು ಮೂಡಿಸಲಾಯಿತು
ಕಡೂರು ತಾಲ್ಲೂಕಿನ ಸರಸ್ವತಿಪುರ ಗೇಟ್ ಬಳಿಯ ರಾಗಿ ಹೊಲದಲ್ಲಿ ಕೃಷಿ ಇಲಾಖೆಯಿಂದ ಪ್ರಾತ್ಯಕ್ಷಿಕೆಯ ಮೂಲಕ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆಯ ಬಗ್ಗೆ  ರೈತರಿಗೆ ಅರಿವು ಮೂಡಿಸಲಾಯಿತು   

ಕಡೂರು: ಮಣ್ಣಿನ ಸ್ವತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಸುಲಭ ಬಳಕೆಗೆ ಯೋಗ್ಯವಾದ ನ್ಯಾನೊ ಯೂರಿಯಾ ಗೊಬ್ಬರ ಬಳಸಿದರೆ ಕೃಷಿಭೂಮಿ ಫಲವತ್ತತೆ ಉಳಿಕೆಗೆ ವರದಾನವಾಗಲಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಎಚ್.ಎಲ್.ಸುಜಾತ ತಿಳಿಸಿದರು.

ತಾಲ್ಲೂಕಿನ ಸರಸ್ವತಿಪುರ ಗೇಟ್ ಬಳಿಯ ರೈತ ಚಂದ್ರಪ್ಪ ಅವರ ರಾಗಿ ಹೊಲದಲ್ಲಿ ಗುರುವಾರ ಕೃಷಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನ್ಯಾನೋ ಯೂರಿಯಾ ಮತ್ತು ಡಿಎಪಿ ಬಳಕೆಯ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.

ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ದ್ರಾವಣ ಮಾರುಕಟ್ಟೆಯಲ್ಲಿ ಲಭ್ಯವಿದೆ. ಯೂರಿಯಾ ಗೊಬ್ಬರಕ್ಕೆ ರೈತರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದ್ರವ ರೂಪದ ನ್ಯಾನೋ ಯೂರಿಯಾವನ್ನು ಪರಿಚಯಿಸಲಾಗಿದ್ದು ಇದರ ಬಳಕೆ ಮಾಡಿಕೊಳ್ಳಬಹುದಾಗಿದೆ. ಬಯಲುಸೀಮೆಯ ತಾಲ್ಲೂಕಿನ ಭಾಗದಲ್ಲಿ ಬಹುತೇಕ ಜಮೀನುಗಳಲ್ಲಿ ಮಣ್ಣಿನ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ ಹಸಿರೆಲೆ ಗೊಬ್ಬರ ಬಳಸದೆ ಇರುವ ಜಮೀನುಗಳು ಸಾಕಷ್ಟು ಕಂಡು ಬಂದಿದೆ. 0.4 ರಷ್ಟು ಕಡಿಮೆ ಇರುವ ಸಾವಯವ ಇಂಗಾಲ ಅಂಶದ ಕೊರತೆ ಕಾಣುತ್ತಿದೆ. ಇದರಿಂದ ವೈಜ್ಞಾನಿಕವಾಗಿ ಬಿತ್ತನೆಗೆ ಯೋಗ್ಯವಲ್ಲದ ಪ್ರದೇಶವೆಂದು ಗುರುತಿಸಲಾಗುತ್ತದೆ. ಮಣ್ಣಿನ ಸತ್ವವನ್ನು ಹೆಚ್ಚಿಸಿಕೊಳ್ಳಲು 0.5ಕ್ಕೂ ಹೆಚ್ಚು ಸಾಂದ್ರತೆಯ ಮಣ್ಣಿನ ಸತ್ವವನ್ನು ಕಾಪಾಡಿಕೊಂಡಾಗ ಉತ್ತಮವಾದ ಪೈರನ್ನು ಕಾಪಾಡಿಕೊಳ್ಳಬಹುದು ಎಂದರು.

ADVERTISEMENT

ಹಸಿರೆಲೆ ಗೊಬ್ಬರ ಬಳಕೆಯ ಪ್ರಮಾಣ ಕಡಿಮೆಯಾದ ಪರಿಣಾಮ ತಾಲ್ಲೂಕಿನಲ್ಲಿ ಮಣ್ಣಿನಲ್ಲಿ ಶಕ್ತಿ ಕಳೆದುಕೊಂಡಂತಾಗಿದ್ದು, ಇದಕ್ಕೆ ರೈತರು ಆಸ್ಪದ ನೀಡದೆ ಕಾಲಕ್ಕೆ ಅನುಗುಣವಾಗಿ ಮಣ್ಣಿನ ಸತ್ವವನ್ನು ಹೆಚ್ಚಿಸಿಕೊಳ್ಳಲು ಮುಂದಾಗಬೇಕು. ಅಗತ್ಯಕ್ಕೆ ತಕ್ಕಂತೆ ಹಸಿರೆಲೆ ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಕೃಷಿ ಇಲಾಖೆ ವತಿಯಿಂದಲೇ ನ್ಯಾನೋ ಯೂರಿಯಾ ಗೊಬ್ಬರ ಬಳಕೆಯ ಬಗ್ಗೆ ತಾಲ್ಲೂಕಿನಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಹೋಬಳಿ ಭಾಗಗಳಲ್ಲಿ ಪೂರಕವಾದ ಮಾಹಿತಿಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಎಂ. ಮಾತನಾಡಿ, ಒಂದು ಎಕರೆಗೆ 500 ಮಿ.ಲೀನಷ್ಟು ನ್ಯಾನೋ ಯೂರಿಯಾ ಅವಶ್ಯಕತೆ ಇದ್ದು, ಡ್ರೋನ್ ಸಹಾಯದಿಂದ ಬಳಕೆ ಮಾಡುವುದಾದರೆ 10 ಲೀ ನೀರಿಗೆ 500 ಎಂ.ಎಲ್.ನ್ಯಾನೋ ಯೂರಿಯಾ ಬಳಸಬಹುದಾಗಿದೆ. ಕ್ಯಾನ್‌ಗಳ ಬ್ಯಾಟರಿ ಅಪರೇಟಿಂಗ್ ವಿಧಾನದಲ್ಲಿ ಬಳಸುವುದಾದರೆ 1 ಲೀ ನೀರಿಗೆ 4 ಎಂ.ಎಲ್. ನ್ಯಾನೋ ಯೂರಿಯಾ ದ್ರಾವಣವನ್ನು ಸಿಂಪಡಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಬಳಿಕ ಡ್ರೋನ್ ಸಹಾಯದಿಂದ ಪ್ರಾಯೋಗಿಕವಾಗಿ ನ್ಯಾನೋ ಯೂರಿಯಾ ದ್ರಾವಣವನ್ನು ಸಿಂಪಡಿಸಲಾಯಿತು. ಇಫ್ಕೋ ಕಂಪನಿಯ ಸಂಯೋಜಕ ಅತಾವುಲ್ಲಾ ಡ್ರೋನ್ ಸಹಾಯದಿಂದ ನ್ಯಾನೋ ಯೂರಿಯಾ ದ್ರಾವಣ ಬಳಕೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಉಪನಿರ್ದೇಶಕಿ ಹಂಸವೇಣಿ, ಸಹಾಯಕ ನಿರ್ದೇಶಕಿ ಉಷಾ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ರುದ್ರೇಗೌಡ, ಸರಸ್ವತಿಪುರ ಗ್ರಾ.ಪಂ ಅಧ್ಯಕ್ಷ ಪದ್ಮನಾಭ್, ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ವಿ.ಆನಂದ್, ದಿವಾಕರ್, ಹರೀಶ್‌ಗೌಡ, ಮಂಜುನಾಥ್, ಕೃಷಿಕ ಸಮಾಜದ ನಿರ್ದೇಶಕರಾದ ವಡೇರಹಳ್ಳಿ ಅಶೋಕ್, ಮಾಚಗೊಂಡನಹಳ್ಳಿ ಅಶೋಕ್, ಸಮೃದ್ಧಿ ಕೃಷಿ ಕೇಂದ್ರದ ಮಧು, ತಾಂತ್ರಿಕ ಸಿಬ್ಬಂದಿ ಹರೀಶ್, ಶರತ್, ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.