ADVERTISEMENT

ಚಿಕ್ಕಮಗಳೂರು | ಕ್ರೀಡಾಂಗಣ: ಇಲ್ಲ ಸೌಕರ್ಯ

ಕೆಪಿಟಿಸಿಎಲ್‌ನ ಸಿಎಸ್‌ಆರ್‌ ಅನುದಾನದಲ್ಲಿ ₹5 ಕೋಟಿ ಮೊತ್ತ ಕಾಮಗಾರಿ ಆರಂಭಕ್ಕೆ ಯೋಜನೆ

ವಿಜಯಕುಮಾರ್ ಎಸ್.ಕೆ.
Published 7 ಏಪ್ರಿಲ್ 2025, 7:19 IST
Last Updated 7 ಏಪ್ರಿಲ್ 2025, 7:19 IST
ಚಿಕ್ಕಮಗಳೂರಿನ ಶತಮಾನೋತ್ಸವ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಚಿಕ್ಕಮಗಳೂರಿನ ಶತಮಾನೋತ್ಸವ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕ್ರೀಡೆಗೆ ಜನರಲ್ಲಿ ಆಸಕ್ತಿ ಇದ್ದರೂ, ಕ್ರೀಡಾಂಗಣ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವು ಕಾಮಗಾರಿ ಅರ್ಧಕ್ಕೆ ನಿಂತಿದ್ದರೆ, ಹಲವು ಕ್ರೀಡಾಂಗಣಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ಇನ್ನೂ ಕೆಲವೆಡೆ ನಿರ್ಮಾಣಕ್ಕೆ ಕಾದಿವೆ.

ಜಿಲ್ಲಾ ಕೇಂದ್ರದಲ್ಲಿ ಮೂರು ಹೊರಾಂಗಣ ಕ್ರೀಡಾಂಗಣ, ಒಂದು ಒಳಾಂಗಣ ಕ್ರೀಡಾಂಗಣ ಇದೆ. ಶತಮಾನೋತ್ಸವ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 2020–21ರಲ್ಲಿ ₹6.74 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಯೂ ಆರಂಭವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2022ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.

ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರರು, ಜಲ್ಲಿ ಸುರಿದು ಬಿಟ್ಟು ಹೋಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಉಳಿಕೆ ಕಾಮಗಾರಿಯನ್ನು ಈ ಮೊತ್ತದಲ್ಲಿ ಪೂರ್ಣಗೊಳಿಸಲು ಹೊಸದಾಗಿ ಟೆಂಡರ್ ಕರೆಯಲು ಲೋಕೋಪಯೋಗಿ ಇಲಾಖೆ ಸಿದ್ಧತೆ ನಡೆಸಿದೆ. ಮತ್ತೆ ಕಾಮಗಾರಿ ಆರಂಭಿಸಲು ಹೆಚ್ಚುವರಿಯಾಗಿ ₹1.16 ಕೋಟಿ ಅನುದಾನದ ಅಗತ್ಯವಿದೆ.

ADVERTISEMENT

ಈ ಹಣ ಬಿಡುಗಡೆಯಾದರೆ ಕಾಮಗಾರಿ ಆರಂಭವಾಗಲಿದೆ. ಕೆಪಿಟಿಸಿಎಲ್‌ನ ಸಿಎಸ್‌ಆರ್‌ ಅನುದಾನದಲ್ಲಿ ₹5 ಕೋಟಿ ಮೊತ್ತ ಕಾಮಗಾರಿ ಆರಂಭಿಸಲು ಯೋಜನೆ ರೂಪುಗೊಂಡಿದೆ. ಈ ಕಾಮಗಾರಿಯೂ ಪೂರ್ಣಗೊಂಡರೆ ಕ್ರೀಡಾಂಗಣ ಹೊಸ ರೂಪ ಪಡೆಯಲಿದೆ. 

ಕಾಮಗಾರಿಗಳು ಆರಂಭವಾಗಲು ಇನ್ನಷ್ಟು ದಿನ ಬೇಕಿದ್ದು, ಅಲ್ಲಿಯ ತನಕ ಚಿಕ್ಕಮಗಳೂರಿನ ಜನ ಕಾಯಬೇಕಿದೆ. ಸದ್ಯಕ್ಕೆ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನವೇ ಕ್ರೀಡಾಪಟುಗಳಿಗೆ ಆಸರೆಯಾಗಿದೆ. 

ಇನ್ನು ‌ತಾಲ್ಲೂಕು ಕೇಂದ್ರಗಳ ಪೈಕಿ ಕಡೂರು, ಎನ್.ಆರ್.ಪುರ, ಮೂಡಿಗೆರೆಯಲ್ಲಿ ಮಾತ್ರ ತಾಲ್ಲೂಕು ಕ್ರೀಡಾಂಗಣಗಳಿವೆ. ಉಳಿದೆಡೆ ನಿರ್ಮಾಣ ಆಗಬೇಕಿದೆ. 

ಪೂರಕ ಮಾಹಿತಿ: ಕೆ.ಎನ್‌. ರಾಘವೇಂದ್ರ, ಬಾಲು ಮಚ್ಚೇರಿ, ಜೆ.ಒ.ಉಮೇಶ್‌ಕುಮಾರ್‌, ಕೆ.ವಿ. ನಾಗರಾಜ, ನಾಗರಾಜ, ರವಿಕುಮಾರ್‌ ಶೆಟ್ಟಿಹಡ್ಲು, ರವಿ ಕೆಳಂಗಡಿ

ಮೂಡಿಗೆರೆ ಹೊಯ್ಸಳ‌ ಕ್ರೀಡಾಂಗಣದಲ್ಲಿ ಮಳೆ‌ ನೀರು ಸಂಗ್ರಹವಾಗಿರುವುದು
aಭಿವೃದ್ದಿ ಕಾಣದ ಅಜ್ಜಂಪುರದ ಶೆಟ್ರು ಸಿದ್ದಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣ
ನರಸಿಂಹರಾಜಪುರದಲ್ಲಿರುವ ರಾಷ್ಟ್ರಕವಿ ಕುವೆಂಪು ತಾಲ್ಲೂಕು ಕ್ರೀಡಾಂಗಣ
ಶೃಂಗೇರಿಯಲ್ಲಿ ಕ್ರೀಡಾಂಗಣವಿಲ್ಲ
ಶೃಂಗೇರಿ: ಪಟ್ಟಣದಲ್ಲಿ ಕ್ರೀಡಾಂಗಣ ಇಲ್ಲದೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಹಿನ್ನೆಡೆಯಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ಕ್ರಿಕೆಟ್ ವಾಲಿಬಾಲ್ ಕಬ್ಬಡ್ಡಿ ಕೊಕ್ಕೊ ಸೇರಿ ಎಲ್ಲಾ ರೀತಿಯ ಕ್ರೀಡಾಪಟುಗಳಿದ್ದು ಕ್ರೀಡಾಂಗಣ ಇಲ್ಲದೆ ಪ್ರತಿಭೆಗೆ ಅವಕಾಶ ಇಲ್ಲವಾಗಿದೆ. ತಾಲ್ಲೂಕಿನ ಧರೇಕೊಪ್ಪ ಶಾಲೆಯ ಆಟದ ಮೈದಾನ ವೈಕುಂಠಪುರ ಪ್ರೌಢಶಾಲೆ ಆಟದ ಮೈದಾನ ನೆಮ್ಮಾರ್ ಪ್ರೌಢಶಾಲೆಯ ಆಟದ ಮೈದಾನಗಳನ್ನು ತಾಲ್ಲೂಕು ಕ್ರೀಡಾಂಗಣಗಳಾಗಿ ಪರಿವರ್ತಿಸುವ ಕುರಿತು ವರ್ಷದ ಹಿಂದೆ ಶಾಸಕರು ಮತ್ತು ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನೀರ್ದೆಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಎಲ್ಲಾ ಕ್ರೀಡಾಂಗಣಗಳು ತಾಲ್ಲೂಕಿನಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದು ಅಲ್ಲಿ ಕ್ರೀಡಾಂಗಣ ಮಾಡಿದರೆ ಅಭ್ಯಾಸ ಮಾಡಲು ಕಷ್ಟ ಎಂದು ಕ್ರೀಡಾಪಟುಗಳ ಅಭಿಪ್ರಾಯ. ಶೃಂಗೇರಿ ತಾಲ್ಲೂಕಿನ ವಿದ್ಯಾನಗರ ಸರ್ಕಾರಿ ಶಾಲೆಯ ಆಟದ ಮೈದಾನವನ್ನು ಜೆಸಿಬಿಎಂ ಕಾಲೇಜಿಗೆ ಲೀಸ್‍ಗೆ ನೀಡಿದ 2 ಎಕರೆ ಜಾಗದಲ್ಲಿ ಸರ್ಕಾರ ಸುಪರ್ಧಿಗೆ ಪಡೆದು ಕ್ರೀಡಾಂಗಣ ಮಾಡಿದರೆ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ. ಕೂಡಲೇ ಕಾರ್ಯರೂಪಕ್ಕೆ ಬಂದರೆ ಭವಿಷ್ಯದ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾ ಪರೀವಿಕ್ಷಕ ಎಸ್. ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಕನಸಾಗಿಯೇ ಉಳಿದ ರನ್ನಿಂಗ್ ಟ್ರ್ಯಾಕ್
ಮೂಡಿಗೆರೆ: ತಾಲ್ಲೂಕು ಕೇಂದ್ರದ ಏಕೈಕ ಕ್ರೀಡಾಂಗಣವಾಗಿರುವ ಪಟ್ಟಣದ ಹೊಯ್ಸಳ ಕ್ರೀಡಾಂಗಣವು ಹಲವು ಸಮಸ್ಯೆಗಳಿಂದಾಗಿ ಕ್ರೀಡಾಸಕ್ತರಿಂದ ದೂರ ಉಳಿಯುವಂತಾಗಿದೆ. ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣದಲ್ಲಿ ಕ್ರೀಡೆಗೆ ಬೇಕಾದ ಸವಲತ್ತುಗಳು ಮರೀಚಿಕೆಯಾಗಿವೆ. ಕ್ರೀಡಾಂಗಣದಲ್ಲಿ ರನ್ನಿಂಗ್ ಟ್ರ್ಯಾಕ್ ಇಲ್ಲದ ಕಾರಣ ಓಟಗಾರರು ಕ್ರೀಡಾಂಗಣದ ಸುತ್ತ ಬೆಳೆದಿರುವ ಕಳೆಯ ನಡುವೆಯೇ ಓಡುವಂತಾಗಿದೆ. ಪೊಲೀಸ್ ಸೈನ್ಯಕ್ಕೆ ಸೇರಲು ದೈಹಿಕ ಸಾಮಾರ್ಥ್ಯಕ್ಕಾಗಿ ಅಭ್ಯಾಸ ನಡೆಸುವವರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಾರೆ.  ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಹೈಮಾಸ್ಟ್ ವಿದ್ಯುತ್ ದೀಪವನ್ನು ತಡೆಗೋಡೆ ನಿರ್ಮಾಣಕ್ಕಾಗಿ ತೆರವುಗೊಳಿಸಿದ್ದು ತಡೆಗೋಡೆ ಕಾಮಗಾರಿ ಮುಗಿದರೂ ಅಳವಡಿಕೆಯಾಗಿಲ್ಲ. ಕಗ್ಗತ್ತಲೆದರೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ. ಕ್ರೀಡಾಂಗಣದಲ್ಲಿ ಶೌಚಾಲಯ ನಿರ್ಮಿಸಿದ್ದರೂ ನಿರ್ವಹಣೆಯಿಲ್ಲದೇ ಸೊರಗಿದ್ದು ಕ್ರೀಡಾಸಕ್ತರು ಆವರಣದ ಗೋಡೆಗಳ ಬಳಿಯೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಕ್ರೀಡಾಂಗಣದಲ್ಲಿ ವೇದಿಕೆಯಿಲ್ಲದ ಕಾರಣ ರಾಷ್ಟ್ರೀಯ ಹಬ್ಬಗಳ ಆಚರಣೆ ವೇಳೆ ಪೆಂಡಾಲ್ ನಿರ್ಮಿಸಿ ಕಾರ್ಯಕ್ರಮ ಮಾಡುವ ಪರಿಸ್ಥಿತಿಯಿದೆ. ಸೂಕ್ತ ಜಾಗವಿದ್ದರೂ ಮೂಲಸೌಲಭ್ಯ ಕಲ್ಪಿಸದಿರುವುದಕ್ಕೆ ಕ್ರೀಡಾಭಿಮಾನಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಮೂಲ ಸೌಕರ್ಯ ವಂಚಿತ ಕ್ರೀಢಾಂಗಣ
ಅಜ್ಜಂಪುರ: ತಾಲ್ಲೂಕಿನ ಬಹುತೇಕ ಕ್ರೀಡಾ ಚಟುವಟಿಕೆಗಳು ನಡೆಯುವ ಪಟ್ಟಣದ ಶೆಟ್ರು ಸಿದ್ದಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣ ಮೂಲ ಸೌಕರ್ಯ ಕೊರತೆಯಿಂದ ನರಳುತ್ತಿದೆ. ಕ್ರೀಡಾಂಗಣ ಅಭಿವೃದ್ಧಿ ಕಂಡಿಲ್ಲ. ಓಟದ ಟ್ರ‍್ಯಾಕ್ ಉದ್ದ ಜಿಗಿತ ಎತ್ತರ ಜಿಗಿತದ ಪಿಚ್ ಕೊಕ್ಕೊ ಕಬಡ್ಡಿ ಕ್ರಿಕೆಟ್ ವಾಲಿಬಾಲ್ ಥ್ರೋಬಾಲ್ ಪುಟ್ ಬಾಲ್ ಅಂಕಣ ನಿರ್ಮಾಣಗೊಂಡಿಲ್ಲ. ಬಯಲು ರಂಗ ಮಂದಿರ ಹೊರತುಪಡಿಸಿ ಮತ್ಯಾವ ಸೌಕರ್ಯವೂ ಇಲ್ಲ. ಕ್ರೀಡಾ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಠಿಯಾಗಿಲ್ಲ. ಕ್ರೀಡಾಂಗಣ ಮದ್ಯ ವ್ಯಸನಿಗಳ ಅಡ್ಡೆಯಾಗಿದೆ. 
ಕೊಪ್ಪದಲ್ಲಿ ಕ್ರೀಡಾಂಗಣವೇ ಇಲ್ಲ
ಕೊಪ್ಪ: ಇಲ್ಲಿ ತಾಲ್ಲೂಕು ಕ್ರೀಡಾಂಗಣ ಎಂಬುದು ಇಲ್ಲ. ಶಾಲಾ ಮಕ್ಕಳ ಕ್ರೀಡಾಕೂಟ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣವನ್ನೇ ಆಶ್ರಯಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಹೆಸರಿನ ಚಿಕ್ಕ ಕ್ರೀಡಾಂಗಣವಿದ್ದು ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಶೋಚಾಲಯ ಮತ್ತಿತರೆ ಸೌಕರ್ಯ ಕೊರತೆಯಿಂದಾಗಿ ಕ್ರೀಡಾಕೂಟ ಕಾರ್ಯಕ್ರಮಗಳ ಆಯೋಜನೆಗೆ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕ್ರೀಡಾಂಗಣ ನಿರ್ಮಾಣದ ಅವಶ್ಯತೆ ಇರುವುದರ ಬಗ್ಗೆ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಒತ್ತಾಯ ಕೇಳಿ ಬರುತ್ತಿದ್ದರೂ ಈವರೆಗೆ ಕ್ರೀಡಾಂಗಣ ನಿರ್ಮಾಣದ ಕುರಿತು ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.
ಸೌಲಭ್ಯಗಳ ಕೊರತೆ 
ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಲ್ಲಿ ಸರ್ಕಾರ ಪದವಿ ಪೂರ್ವ ಕಾಲೇಜಿನ ವ್ಯಾಪ್ತಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಿದ್ದರೂ ಹಲವು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಕ್ರೀಡಾಂಗಣಕ್ಕೆ ರಾಷ್ಟ್ರಕವಿ ಕುವೆಂಪು ಕ್ರೀಡಾಂಗಣ ಎಂದು ನಾಮಕರಣ ಮಾಡಿ 2004ರ ಫೆ. 15ರಂದು ಅಂದು ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಉದ್ಘಾಟಿಸಿದ್ದರು. ಈ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕೆಂಬುದು ಕ್ರೀಡಾಪಟುಗಳ ಹಲವು ವರ್ಷದ ಬೇಡಿಕೆಯಾಗಿದ್ದು ಈವರೆಗೆ ಈಡೇರಿಲ್ಲ. ಕ್ರೀಡಾಂಗಣದಲ್ಲಿ ಕೂರಲು ಒಂದು ಕಡೆ ಮಾತ್ರ ಆಸನದ ವ್ಯವಸ್ಥೆಯಿದೆ. ಸುತ್ತಲೂ ಕೂರಲು ಆಸನದ ವ್ಯವಸ್ಥೆ ಮಾಡಬೇಕಾಗಿದೆ. ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿ ಸೌಲಭ್ಯವಿಲ್ಲ. ಇದರಿಂದ ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ. ಕ್ರೀಡಾಂಗಣದಿಂದ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸುತ್ತ ಚರಂಡಿ ನಿರ್ಮಾಣವಾಗಿಲ್ಲ. ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟಗಳು ಮಳೆಗಾಲದ ಸಂದರ್ಭದಲ್ಲಿ ನಡೆಯುವುದರಿಂದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಗಮನ ಹರಿಸಬೇಕೆಂಬುದು ಕ್ರೀಡಾಪಟುಗಳ ಆಗ್ರಹ. ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾಂಗಣದ ಸುತ್ತ ನಡಿಗೆ ನಿರ್ಮಿಸಲು ₹21 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭವಾಗಿದೆ.
ವಿಶಾಲ ಕ್ರೀಡಾಂಗಣ: ಸೌಕರ್ಯ ಅಲ್ಪ
ಕಡೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಂಭಾಗದಲ್ಲಿರುವ ಬಿ.ಆರ್. ಅಂಬೇಡ್ಕರ್ ತಾಲ್ಲೂಕು ಕ್ರೀಡಾಂಗಣ ವಿಶಾಲವಾಗಿದ್ದರೂ ಕೆಲ ಕೊರತೆಗಳು ಉಳಿದುಕೊಂಡಿವೆ. ಕ್ರೀಡಾಂಗಣದಲ್ಲಿ ಮೆಟ್ಟಿಲುಗಳನ್ನು ಮಾಡಿ ಅಲ್ಲಿ ಕುಳಿತು ಕ್ರೀಡಾ ಚಟುವಟಿಕೆ ವೀಕ್ಷಿಸಲು ಅನುಕೂಲ ಮಾಡಲಾಗಿದೆ. ಕ್ರೀಡಾಂಗಣದ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳು ಬಹಳಷ್ಟು ಸುಸ್ಥಿತಿಯಲ್ಲಿ ಇಲ್ಲ. ಈ ಕ್ರೀಡಾಂಗಣ ಹೆಚ್ಚು ಉಪಯೋಗವಾಗುವುದು ರಾಷ್ಟೀಯ ಹಬ್ಬಗಳಿಗೆ ಮಾತ್ರ. ಮಿಕ್ಕಂತೆ ಬೇರೆ ಯಾವ ಚಟುವಟಿಕೆಗಳು ನಡೆಯುವುದಿಲ್ಲ. ಬೆಳಗಿನ ವೇಳೆ ನಾಗರಿಕರು ನಡಿಗೆಗೆ ಈ ಕ್ರೀಡಾಂಗಣ ಬಳಕೆಯಾಗುತ್ತಿದೆ. ಕ್ರೀಡಾಂಗಣದೊಳಗೆ ಒಂದೆರಡು ವಿಶಾಲ ಕೊಠಡಿಗಳಿದ್ದು ಅದರಲ್ಲಿ ಒಂದನ್ನು ಯೋಗ ಚಟುವಟಿಕೆ ನಡೆಸಲಾಗುತ್ತಿದೆ. ಈ ಕೊಠಡಿಯ ಚಾವಣಿ ಪೂರ್ಣ ಹಾಳಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದ ಟ್ಯಾಂಕ್ ಮತ್ತು ಪೈಪುಗಳು ಕಳ್ಳರ ಪಾಲಾಗಿವೆ. ಇಲ್ಲಿನ‌ ಉಳಿದ ಕೊಠಡಿಗಳ ಪರಿಸ್ಥಿತಿಯೂ ಹಾಗೆಯೇ ಇದೆ. 
ಕ್ರೀಡಾಂಗಣ: ಚಿಗುರಿದ ಕನಸು
ತರೀಕೆರೆ: ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಕ್ರೀಡಾಂಗಣಗಳಿಲ್ಲದೆ ಕ್ರೀಡಾಭಿಮಾನಿಗಳಿಗೆ ತೊಂದರೆಯಾಗಿತ್ತು. ತಾಲೂಕಿನಾದ್ಯಂತ ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ಇರುವ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸರಿಯಾದ ಸ್ಥಳಾವಕಾಶ ಇರಲಿಲ್ಲ. ಇದರಿಂದ ನಿರಾಶೆಗೊಂಡಿದ್ದ ಕ್ರೀಡಾಪಟುಗಳು ತಮ್ಮ ತಮ್ಮ ಕ್ರೀಡೆಗಳಲ್ಲಿ ಪ್ರತಿಭೆಯನ್ನು ಹೊರ ಹಾಕುವಲ್ಲಿ ವಂಚಿತರಾಗಿದ್ದರು. ಈಗ ತರೀಕೆರೆ ಪುರಸಭಾ ವ್ಯಾಪ್ತಿಗೊಳಪಡುವ ಎ. ರಂಗಾಪುರ ಗ್ರಾಮದಲ್ಲಿರುವ ಸುಮಾರು 8 ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಿಸಲು ಪುರಸಭೆ ಆಡಳಿತ ಯುವಜನ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಲು ಅನುಮೋದನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕ್ರೀಡಾಂಗಣವೂ ಇಲ್ಲ; ಜಾಗವೂ ಇಲ್ಲ
ಕಳಸ: ತಾಲ್ಲೂಕು ಕೇಂದ್ರ ನಿರ್ಮಾಣವಾಗಿ ನಾಲ್ಕು ವರ್ಷ ಕಳೆದಿದೆ. ಆದರೆ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡಲು ಕೂಡ ಕ್ರೀಡಾಂಗಣ ಇಲ್ಲವಾಗಿದೆ. ಕೆಪಿಎಸ್ ಶಾಲಾ ಆವರಣದಲ್ಲಿ ಆಚರಣೆ ಮಾಡಲಾಗುತ್ತಿದೆ. ಕ್ರೀಡಾಂಗಣಕ್ಕೆ 5 ಏಕೆರೆ ಜಾಗ ಬೇಕು ಎಂಬ ಕೂಗಿದೆ. ಕಳಸ ತಾಲ್ಲೂಕು ಕೇಂದ್ರಕ್ಕೆ 40 ಎಕೆರೆ ಜಾಗದ ಬೇಡಿಕೆ ಇದೆ. ಆದರೆ ಇದಕ್ಕೆ ಪರಿಭಾವಿತ ಅರಣ್ಯ ಅಡ್ಡಿಯಾಗಿದೆ. ಆದ್ದರಿಂದ ಕ್ರೀಡಾಂಗಣಕ್ಕೆ ಜಾಗ ಸಿಗುವುದೇ ಅನುಮಾನವಾಗಿದೆ. ಸರ್ಕಾರಿ ಕಾಲೇಜು ಮೈದಾನದಲ್ಲಿ ಎಲ್ಲ ಕ್ರೀಡಾ ಚಟುವಟಿಕೆ ನಡೆಯುತ್ತಿದ್ದು ಶಾಲಾ ಕಾಲೇಜು ಚಟುವಟಿಕೆಗೆ ಅಡ್ಡಿ ಆಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.