ಚಿಕ್ಕಮಗಳೂರು: ‘ನಗರದಲ್ಲಿ ಗುಂಡಿ ಬಿದ್ದಿರುವ ಎಲ್ಲಾ ರಸ್ತೆಗಳಿಗೆ ಡಾಂಬರ್ ಹಾಕಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ನಗರದ ಬಸವೇಶ್ವರ ರಸ್ತೆ ಬಸವತತ್ವ ಪೀಠದ ಮುಂಭಾಗದಲ್ಲಿ ಹಾಗೂ ಕಣಿವೆ ರುದ್ರೇಶ್ವರ ದೇವಸ್ಥಾನದ ಸಮೀಪ ತಲಾ ₹12 ಲಕ್ಷ ವೆಚ್ಚದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಬಸ್ ತಂಗುದಾಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಎಲ್ಲಾ ರಸ್ತೆಗಳಿಗೆ ₹20.50 ಕೋಟಿ ವೆಚ್ಚದಲ್ಲಿ ಡಾಂಬರ್ ಹಾಕಲಾಗುವುದು. ಡಿಸೆಂಬರ್‌ನಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಾಧುನಿಕ ಮಾದರಿಯ ಬಸ್ ತಂಗುದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಅದರಂತೆ ನಿರ್ಮಾಣ ಮಾಡಿರುವ ತಂಗುದಾಣಗಳನ್ನು ಉದ್ಘಾಟಿಸಲಾಗುತ್ತಿದೆ ಎಂದರು.
ಕಣಿವೆ ರುದ್ರೇಶ್ವರ ದೇವಸ್ಥಾನದ ಸಮೀಪ, ಕಲ್ಯಾಣ ನಗರ, ಹೌಸಿಂಗ್ ಬೋರ್ಡ್‌ನಲ್ಲಿ ಮತ್ತು ದೊಡ್ಡ ಕುರುಬರಹಳ್ಳಿಯಲ್ಲಿ ಈಗಾಗಲೇ ನಾಲ್ಕು ಬಸ್ ತಂಗುದಾಣ ನಿರ್ಮಾಣ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಂಟರಮಕ್ಕಿ ಬಡಾವಣೆಯಲ್ಲಿ ಮತ್ತು ಪಾಲಿಟೆಕ್ನಿಕ್ ಬಳಿ ಬಸ್ ತಂಗುದಾಣ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ವಿವರಿಸಿದರು.
‘ವಿದೇಶ ಪ್ರವಾಸ ಸಂದರ್ಭದಲ್ಲಿ ಜರ್ಮನಿಯಲ್ಲಿ ಈ ರೀತಿಯ ಬಸ್ ತಂಗುದಾಣಗಳನ್ನು ಗಮನಿಸಿದ್ದೆ. ಅದೇ ಮಾದರಿಯಲ್ಲಿ ನಗರದಲ್ಲೂ ತಂಗುದಾಣಗಳ ನಿರ್ಮಾಣ ಮಾಡಬೇಕೆಂಬ ಕನಸು ಕಟ್ಟಿದ್ದೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ತಂಗುದಾಣ ನಿರ್ಮಿಸಲಾಗಿದೆ’ ಎಂದು ಹೇಳಿದರು.
ಈ ಬಾರಿ ಹೆಚ್ಚು ಮಳೆ ಬಿದ್ದ ಪರಿಣಾಮ ನಗರದಲ್ಲಿ ರಸ್ತೆಗಳು ಗುಂಡಿಗಳು ಹೆಚ್ಚಾಗಿವೆ. ಯುಜಿಡಿ ಮತ್ತು ಅಮೃತ್ ಯೋಜನೆಯಿಂದ ಹಾನಿಯಾಗಿರುವ ರಸ್ತೆಗಳ ಡಾಂಬರ್ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ‘ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಬಸ್ ತಂಗುದಾಣ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿರುವುದು ಒಳ್ಳೆಯ ಕೆಲಸ’ ಎಂದು ಹೇಳಿದರು.
ನಗರಸಭೆ ಸದಸ್ಯ ಅರುಣಕುಮಾರ್ ಮಾತನಾಡಿ, ‘ನಗರದ ಎಲ್ಲಾ ವಾರ್ಡ್‌ಗಳಲ್ಲಿ ರಸ್ತೆಗಳ ಗುಂಡಿ, ಬೀದಿನಾಯಿಗಳ ಉಪಟಳ ಸಮಸ್ಯೆ ಇದೆ. ಅಗತ್ಯ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ, ಲೈಫ್‌ಲೈನ್ ಫೀಡ್ಸ್ ಮಾಲೀಕ ಕಿಶೋರ್‌ಕುಮಾರ್ ಹೆಗ್ಡೆ, ಸದಸ್ಯರಾದ ಗುರುಮಲ್ಲಪ್ಪ, ಎ.ಸಿ.ಕುಮಾರ್, ನಾಮನಿರ್ದೇಶಿತ ಸದಸ್ಯ ಕೀರ್ತಿಶೇಠ್, ಆಯುಕ್ತ ಬಿ.ಸಿ. ಬಸವರಾಜ್ ಸಿಡಿಎ ಆಯುಕ್ತೆ ನಾಗರತ್ನಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಪ್ರವೀಣ್, ಗಂಗಾಧರ್ ಭಾಗವಹಿಸಿದ್ದರು.
ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
₹20 ಕೋಟಿ ವೆಚ್ಚದಲ್ಲಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಎಚ್.ಡಿ.ತಮ್ಮಯ್ಯ ತಿಳಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಆಹ್ವಾನಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.