ಚಿಕ್ಕಮಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಮರಾಠಿಗರು ಎಸಗಿದ್ದಾರೆ ಎನ್ನಲಾದ ದೌರ್ಜನ್ಯವನ್ನು ಖಂಡಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಗೌಡ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡಿಗರಿಗೆ ನ್ಯಾಯ ಸಿಗುತ್ತಿಲ್ಲ. ಕನ್ನಡಿಗರ ಮೇಲೆ ಪರ ಭಾಷಿಗರು ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ಕನ್ನಡ ಸೇನೆ ಖಂಡಿಸುತ್ತದೆ’ ಎಂದರು.
‘ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಬೇಕು ಎಂದು ಆದೇಶ ಮಾಡಿದರೂ ಅದಕ್ಕೆ ಬೆಲೆ ಸಿಗುತ್ತಿಲ್ಲ. ಕನ್ನಡಿಗರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಹಲ್ಲೆ ಮಾಡಿದ ಪುಂಡರನ್ನು ಗಡಿಪಾರು ಮಾಡಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕನ್ನಡ ಸೇನೆ, ಕರ್ನಾಟಕ, ನಾಗರಿಕರು ಹಾಗೂ ಹೋರಾಟಗಾರರು ಎಲ್ಲಾ ಸಂಘಟನೆಗಳು ಸೇರಿ ಉಗ್ರ ಹೋರಾಟ ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆಯ ಜಯಪ್ರಕಾಶ್, ಸಂಜಯ್ ಕುಮಾರ್, ಕೆ.ಟಿ. ರಾಧಕೃಷ್ಣ, ಹುಣಸೇಮಕ್ಕಿ ಲಕ್ಷ್ಮಣ, ಹರೀಶ್ ಮಿತ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.