ಹೇಮಾವತಿ ನದಿ
ಚಿಕ್ಕಮಗಳೂರು: ಮಲೆನಾಡು ಭಾಗದ ಐದು ತಾಲ್ಲೂಕುಗಳ 1,500ಕ್ಕೂ ಹೆಚ್ಚು ಜನವಸತಿಗಳಿಗೆ ತುಂಗಾ, ಭದ್ರಾ, ಹೇಮಾವತಿ ನದಿಗಳಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಹರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆ ಸಿದ್ಧಪಡಿಸಿದೆ.
ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಒಟ್ಟು 1,537 ಜನವಸತಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಪಟ್ಟಣಗಳಿಗೂ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.
ಒಟ್ಟಾರೆ ₹918.95 ಕೋಟಿ ಮೊತ್ತದ ಯೋಜನೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಬೇಕಿದೆ. ಎರಡೂ ಸರ್ಕಾರಕ್ಕೆ ಸ್ಥಳೀಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಶೃಂಗೇರಿ ಪಟ್ಟಣ ಮತ್ತು ತಾಲ್ಲೂಕಿನ ಬಂಡಿಗಾಡಿ, ಚಾವಲಮನೆ, ಹರಿಹರಪುರ ಸುತ್ತಮುತ್ತಲ 694 ಜನವಸತಿಗೆ ಮತ್ತು ಕೊಪ್ಪ ತಾಲ್ಲೂಕಿನ 514 ಜನವಸತಿಗಳಿಗೆ ತುಂಗಾ ನದಿಯಿಂದ ಪೂರೈಸಲು ₹500 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ.
ಎನ್.ಆರ್.ಪುರ ತಾಲ್ಲೂಕಿನ ಬನ್ನೂರು, ಬಿ.ಕನಬೂರು, ಮಾಗುಂದಿ ಸೇರಿ 73 ಜನವಸತಿಗೆ ಭದ್ರಾ ನದಿಯಿಂದ ನೀರು ಪೂರೈಸಲು ಮತ್ತೊಂದು ಯೋಜನೆ ಸಿದ್ಧವಾಗಿದೆ. ಈ ಯೋಜನೆಗೆ ₹135.95 ಕೋಟಿ ಮೊತ್ತವನ್ನು ಅಂದಾಜಿಸಲಾಗಿದೆ.
ಎನ್.ಆರ್.ಪುರ ಪಟ್ಟಣ ಮತ್ತು ತಾಲ್ಲೂಕಿನ ಮುತ್ತಿನಕೊಪ್ಪ ಸುತ್ತಮುತ್ತಲ 124 ಹಳ್ಳಿಗಳಿಗೆ ತುಂಗಾ ನದಿಯಿಂದ ನೀರು ಹರಿಸಲು ₹102 ಕೋಟಿ ಮೊತ್ತದ ಯೋಜನೆ ರೂಪುಗೊಂಡಿದೆ. ಮೂಡಿಗೆರೆ ಪಟ್ಟಣ ಮತ್ತು ತಾಲ್ಲೂಕಿನ ಹಳೇ ಮೂಡಿಗೆರೆ, ಹೆಸಗಲ್ ಸೇರಿ 60 ಹಳ್ಳಿಗಳ್ಳಿ ಹೇಮಾವತಿ ನೀರು ತರಲು ₹90 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿದೆ. ಈ ನಾಲ್ಕು ಯೋಜನೆಗಳಿಂದ ಮೂರು ಪಟ್ಟಣ ಮತ್ತು ನಾಲ್ಕು ತಾಲ್ಲೂಕಿನ 1,455 ಹಳ್ಳಿಗಳಿಗೆ ಅನುಕೂಲ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.