ADVERTISEMENT

ಚಿಕ್ಕಮಗಳೂರಿನಲ್ಲಿ ಮನೆಯೊಂದರ ಮೇಲೆ ಕಲ್ಲು ತೂರಾಟ: ಬಿಗುವಿನ ಪರಿಸ್ಥಿತಿ

ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕರು, ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 18:54 IST
Last Updated 17 ಫೆಬ್ರುವರಿ 2026, 18:54 IST
   

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯ ಮನೆಯೊಂದರ ಮೇಲೆ ಕಲ್ಲು ತೂರಿ, ನುಗ್ಗಲು ಯತ್ನಿಸಿದ ಆರೋಪದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಗುಂಪೊಂದು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದೆ. ಈ ಕುರಿತು ದೂರು– ಪ್ರತಿ ದೂರು ದಾಖಲಾಗಿವೆ.

ವಿಜಯಪುರ ಬಡಾವಣೆಯ ತಾಲ್ಲೂಕು ಪಂಚಾಯಿತಿ ವಸತಿಗೃಹದ ನಿವಾಸಿ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಸುಧಾ ಎಚ್‌.ಜಿ. ಅವರು ನೀಡಿರುವ ದೂರಿನ ಆಧಾರದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಾಲಕರು, ಅವರ ಪೋಷಕರು ಪ್ರತಿದೂರು ನೀಡಿದ್ದು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮತ್ತು ಬಜರಂಗದಳ ಕಾರ್ಯಕರ್ತ ಶ್ಯಾಂ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ವಿವರ: ‘ಸುಧಾ ಅವರ ಮನೆ ಎದುರಿನ ರಸ್ತೆಯಲ್ಲಿ ಪದೇ ಪದೇ ಸಂಚರಿಸುತ್ತಿದ್ದ ಯುವಕರು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು’ ಎಂಬುದು ಮುಸ್ಲಿಂ ಬಾಲಕರ ಮೇಲಿರುವ ಆರೋಪ.

ಸೋಮವಾರ ರಾತ್ರಿಯೂ ಬಾಲಕರು ರಸ್ತೆಯಲ್ಲಿ ಸಾಗಿದಾಗ ಸ್ಥಳೀಯರು ಅಡ್ಡಗಟ್ಟಿದ್ದಾರೆ. ಆರು ಜನರಲ್ಲಿ ನಾಲ್ವರು ಓಡಿಹೋಗಿದ್ದು,ಇಬ್ಬರು ಸಿಕ್ಕಿಕೊಂಡಿದ್ದಾರೆ. ಇಬ್ಬರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಎಲ್ಲರೂ ವಿದ್ಯಾರ್ಥಿಗಳಾಗಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಾವು ಪರಿಶಿಷ್ಟ ಜಾತಿಗೆ ಸೇರಿದ್ದು, ಮನೆಯಲ್ಲಿ ಮಗಳು ಒಬ್ಬಳೇ ಇದ್ದಾಗ  ಮೇಲೆ ಕಲ್ಲು ತೂರಾಟ ನಡೆಸಿ ನುಗ್ಗಲು ಯತ್ನಿಸಿದ್ದರು. ಒಂದು ವಾರದಿಂದ ಇದೇ ರೀತಿ ನಡೆಯುತ್ತಿದೆ. ಅವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಎಲ್ಲರ ವಿರುದ್ಧ ಎಸ್‌ಸಿ., ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಸುಧಾ ಅವರು ದೂರು ನೀಡಿದ್ದು, ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಸ್ಲಿಂ ಬಾಲಕರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ವಿಷಯ ತಿಳಿದ ಮತ್ತೊಂದು ಗುಂಪು ಜಮಾಯಿಸಿ ‘ಬಿಜೆಪಿ, ಬಜರಂಗದಳದ ಕಾರ್ಯಕರ್ತರು ಅಮಾಯಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದರು. ಎರಡೂ ಕಡೆಯವರು ಠಾಣೆ ಎದುರು ಮಧ್ಯರಾತ್ರಿ ಸೇರಿದ್ದರಿಂದ ಬಿಗುವಿನ ಸ್ಥಿತಿ ಮೂಡಿತ್ತು. ಪೊಲೀಸರು ಎರಡೂ ಕಡೆಯವರನ್ನು ಸಮಾಧಾನ ಮಾಡಿ ವಾಪಸ್ ಕಳುಹಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೀಡಿರುವ ದೂರು ಆಧರಿಸಿ ಸಂತೋಷ್ ಕೋಟ್ಯಾನ್ ಮತ್ತು ಶಾಂಗೌಡ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

‘ಬೌಲಿಂಗ್ ಅಭ್ಯಾಸದಿಂದ ಆರಂಭ’

ಕಲ್ಲು ತೂರಾಟ ಆರೋಪ ಪ್ರಕರಣವು ಬೌಲಿಂಗ್ ಅಭ್ಯಾಸ ಮಾಡುವ ಪ್ರಯತ್ನದಲ್ಲಿ ಆರಂಭವಾಗಿದೆ ಎನ್ನಲಾಗಿದೆ. ಸದ್ಯ ಎಫ್‌ಐಆರ್ ದಾಖಲಾಗಿರುವ 6 ಜನರಲ್ಲಿ 17 ವರ್ಷದ ನಾಲ್ವರು ಬಾಲಕರು, 18 ವರ್ಷ, ನಾಲ್ಕು ದಿನಗಳಾಗಿರುವ ಒಬ್ಬ ಯುವಕ, 18 ವರ್ಷ ನಾಲ್ಕು ತಿಂಗಳಿನ ಮತ್ತೊಬ್ಬ ಯುವಕ ಇದ್ದಾರೆ.

ಎಲ್ಲರೂ ವಿದ್ಯಾರ್ಥಿಗಳು. ಒಟ್ಟಾಗಿ ಬರುವ ದಾರಿಯಲ್ಲಿ ಕಲ್ಲುಗಳನ್ನು ಹಿಡಿದು ಬೌಲಿಂಗ್ ಮಾಡುವ ರೀತಿ ಎಸೆದಿದ್ದಾರೆ. ಅದರಲ್ಲಿ ಒಂದು ಕಲ್ಲು ಮನೆಯ ಮುಂದಿನ ಆವರಣಕ್ಕೆ ಹೋಗಿದೆ. ಈ ವಿಷಯಕ್ಕೆ ಜಗಳ ಆರಂಭವಾಗಿದೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ.

ಘಟನೆ ಸಂಬಂಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂತ್ರಸ್ತೆಯು ಪರಿಶಿಷ್ಟ ಜಾತಿಯವರಾಗಿದ್ದು ನಾಗರಿಕ ಹಕ್ಕುಗಳ ರಕ್ಷಣೆ (ಪಿಸಿಆರ್‌) ಕಾಯ್ದೆಯಡಿ ಪೊಲೀಸರು ಕ್ರಮ ವಹಿಸುತ್ತಾರೆ
ಜಿ.ಪರಮೇಶ್ವರ, ಗೃಹಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.