ಚಿಕ್ಕಮಗಳೂರು: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಸೆ.24ರಿಂದ ಮೂರು ದಿನ ಜಿಲ್ಲೆಗೆ ಭೇಟಿ ನೀಡಲಿದ್ದು, ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಕಚೇರಿಗಳು ಸ್ವಚ್ಛಗೊಂಡಿದ್ದರೆ, ಅವರು ಸಾಗುವ ರಸ್ತೆಗಳ ಗುಂಡಿಗಳಿಗೆ ವೆಟ್‌ಮಿಕ್ಸ್ ಹಾಕಿ ಮುಚ್ಚಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಳೆದ ಒಂದು ವಾರದಿಂದ ತಯಾರಿ ನಡೆಯುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳ ಜತೆ ಸಭೆಗಳ ಮೇಲೆ ಸಭೆಗಳನ್ನು ನಡೆಸಿ ಸಲಹೆ–ಸೂಚನೆ ನೀಡಿದ್ದಾರೆ. ಅವರು ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಎಲ್ಲಾ ಸರ್ಕಾರಿ ಕಚೇರಿಗಳು ಸ್ವಚ್ಛಗೊಂಡು ಕಂಗೊಳಿಸುತ್ತಿವೆ.
ಜಿಲ್ಲಾಧಿಕಾರಿ ಕಚೇರಿ ಮುಂದಿನ ಕೊಳ, ಕಚೇರಿ ಸುತ್ತಮುತ್ತಲ ಪ್ರದೇಶ, ಉಪಲೋಕಾಯುಕ್ತರು ವಾಸ್ತವ್ಯ ಹೂಡಲಿರುವ ಪ್ರವಾಸಿ ಮಂದಿರದ ಆವರಣವನ್ನು ಮಂಗಳವಾರ ನೀರಿನಿಂತ ತೊಳೆಯಲಾಯಿತು. ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಜಿಲ್ಲಾ ಆಟದ ಮೈದಾನದಲ್ಲಿ ಅವರು ಬೆಳಿಗ್ಗೆ ವಾಯು ವಿಹಾರ ನಡೆಸುವ ಸಾಧ್ಯತೆ ಇರುವುದರಿಂದ ಅಲ್ಲಿಯೂ ಸ್ವಚ್ಛಗೊಳಿಸಲಾಗಿದೆ. ಅಡ್ಡಾದಿಡ್ಡಿ ಬೆಳೆದಿದ್ದ ಆಲಂಕಾರಿಕ ಗಿಡಗಳನ್ನು ಕಟ್ ಮಾಡಿ ಸರಿಪಡಿಸಲಾಗಿದೆ. ಚರಂಡಿಗಳಲ್ಲಿ ಬೆಳೆದಿದ್ದ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ.
ಕುವೆಂಪು ಕಲಾಮಂದಿರದಲ್ಲಿ ಅಹವಾಲು ಸ್ವೀಕಾರ ಸಭೆ ನಡೆಯಲಿದೆ. ಪ್ರವಾಸಿ ಮಂದಿರದಿಂದ ಕುವೆಂಪು ಕಲಾಮಂದಿರಕ್ಕೆ ಸಾಗುವ ಮಾರ್ಗದಲ್ಲಿ ಇದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಪ್ರಮುಖವಾಗಿ ನಾಯ್ಡು ಬೀದಿಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ವೆಟ್‌ಮಿಕ್ಸ್ ತುಂಬಿ ಸಮತಟ್ಟು ಮಾಡಲಾಗಿದೆ. ಕುವೆಂಪು ಕಲಾಮಂದಿರದ ಆವರಣ ಮತ್ತು ಗೋಡೆಗಳನ್ನು ನೀರಿನಿಂದ ತೊಳೆದು ಸಿಂಗರಿಸಲಾಗಿದೆ.
ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ, ನಗರಸಭೆ, ತಾಲ್ಲೂಕು ಕಚೇರಿಗಳಿಗೆ ಅವರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಆವರಣಗಳನ್ನು ಸ್ವಚ್ಛಗೊಳಿಸಲಾಗಿದೆ.
ಅಹವಾಲು ಸ್ವೀಕಾರ ಇಂದು ಸೆ.24ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವರು. ಅಲ್ಲಿಯೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಿದ್ದಾರೆ. ಸೆ.25ರಂದು ಬೆಳಿಗ್ಗೆ 9.45ರಿಂದ 10.45ರವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರೊಂದಿಗೆ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರದ ಕುರಿತು ಸಂವಾದ ನಡೆಸುವರು. ಬಳಿಕ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬಾಕಿ ಪ್ರಕರಣಗಳ ಕುರಿತು ಸಲ್ಲಿಕೆಯಾಗಿರುವ 84 ಪ್ರಕರಣಗಳ ಬಗ್ಗೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಿದ್ದಾರೆ. ಉಪಲೋಕಾಯುಕ್ತರ ಜತೆಗೆ ನಾಲ್ವರು ನ್ಯಾಯಾಧೀಶರ ತಂಡ ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಬಸ್ ನಿಲ್ದಾಣ ಆಸ್ಪತ್ರೆ ಸೇರಿ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.