ಬಿ.ಸಿ. ದಯಾಕರ್
ಚಿಕ್ಕಮಗಳೂರು: ಆನೆ ಮತ್ತು ಕಾಡುಪ್ರಾಣಿಗಳ ಹಾವಳಿಯಿಂದ ಕಾರ್ಮಿಕರ ಜೀವಹಾನಿ, ಬೆಳೆನಷ್ಟ ಮತ್ತು ಜನ ಜೀವನ ಅಸ್ತವ್ಯಸ್ತವಾಗಿದೆ. ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಇಲ್ಲವಾದರೆ ಬ್ಯಾಂಡ್ ಸೆಟ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಬಿ.ಸಿ. ದಯಾಕರ್ ಹೇಳಿದರು.
ಆನೆಗಳನ್ನು ತಕ್ಷಣ ಮರಳಿ ಕಾಡಿಗೆ ಸೇರಿಸುವುದಕ್ಕೆ ಹೆಚ್ಚಿನ ಸಂಖ್ಯೆಯ ಆನೆ ಕಾರ್ಯಪಡೆ ರಚಿಸಬೇಕು. ಸಿಬ್ಬಂದಿಗೆ ವಾಹನಗಳು ಮತ್ತು ಫೋರ್ ವೀಲ್ ಜೀಪ್‌ಗಳ ವ್ಯವಸ್ಥೆ ಮಾಡಬೇಕು. ಅರಣ್ಯದಲ್ಲಿ ಮಾಡಿರುವ ಆನೆಗಳ ಕಂದಕ, ಬ್ಯಾರಿಕೇಡ್, ಟೆಂಟಿಕಲ್ ಬೇಲಿಗಳನ್ನು ಕಾಲ ಕಾಲಕ್ಕೆ ಸರಿಪಡಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾಡು ಪ್ರಾಣಿಗಳು ಭತ್ತದ ಗದ್ದೆಗಳನ್ನು ನಾಶ ಮಾಡಿರುವುದರಿಂದ ರೈತರಿಗೆ ಭತ್ತ ಬೆಳೆಯಲು ವರ್ಷಕ್ಕೆ 1 ಎಕರೆಗೆ ₹25 ಸಾವಿರ ಸಹಾಯಧನ ಘೋಷಣೆ ಮಾಡಬೇಕು. ಪ್ರಾಣ ಹಾನಿಗೆ ₹30 ಲಕ್ಷ ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಕಾಡು ಪ್ರಾಣಿಗಳು ಜೀವನ ಮಾಡಲು ಬಗನೆ ಮರ, ಬಸರಿ ಮರ, ಹತ್ತಿಮರ, ಹಲಸು, ಮಾವು, ಹೆಬ್ಬಲಸು, ವಾಟೆ, ಬಿದಿರು ಮತ್ತು ಹುಲ್ಲು ಇತರೆ ಬೆಳೆಗಳು ಹಾಗೂ ನೀರಿನ ವ್ಯವಸ್ಥೆ ಅರಣ್ಯದಲ್ಲಿ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಶಾಶ್ವತ ಸಮಗ್ರ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಸಮಸ್ಯೆಗಳು ಮತ್ತು 53, 57 ಮತ್ತು ವಸತಿ ರಹಿತರ ಇವುಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸರ್ಫೇಸಿ ಕಾಯಿದೆ ರೈತ ಕಾಫಿ ಬೆಳೆಗಾರರಿಗೆ ಮರಣ ಶಾಸನವಾಗಿದೆ. ಕೃಷಿಯೇತರ ಚಟುವಟಿಕೆಗಳಿಗೆ ಅನ್ವಯವಾಗುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ತುಳಸೇಗೌಡ, ಜಿಲ್ಲಾ ಸಂಚಾಲಕ ರಮೇಶಗೌಡ, ಬಸವರಾಜಪ್ಪ, ಸುಧೀರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.