ಚಿಕ್ಕಮಗಳೂರು: ಆದಿವಾಸಿಗಳಲ್ಲಿನ ಅಪೌಷ್ಟಿಕತೆ ತಪ್ಪಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಪೌಷ್ಟಿಕ ಆಹಾರವೇ ಅಪೌಷ್ಟಿಕತೆಯಿಂದ ಕೂಡಿದೆ ಎಂಬ ಆರೋಪ ಆದಿವಾಸಿಗಳಿಂದ ವ್ಯಕ್ತವಾಗಿದೆ.
ಕಾಡು ಮತ್ತು ಕಾಡಂಚಿನ ಅರಣ್ಯ ಆಧಾರಿತ ಮೂಲ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರ ನೀಡಲು ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೊರಗ, ಜೇನುಕುರುಬ, ಕಾಡುಕುರುಬ,
ಸೋಲಿಗ ಎರವ, ಮಲೆಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ
ಸಮುದಾಯಗಳ ಕುಟುಂಬಗಳಿಗೆ ಉಚಿತವಾಗಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಮೂಲಕ ಒಟ್ಟು 47,859 ಕುಟುಂಬಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, 11 ತಿಂಗಳ ಅವಧಿಗೆ ₹118.87 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಖಾಸಗಿ ಏಜೆನ್ಸಿ ಮೂಲಕ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ.
ಅಂಗನವಾಡಿ ಮತ್ತು ಆಶ್ರಯಮ ಶಾಲೆಗಳ ಮೂಲಕ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಡುತ್ತಿದೆ. ರಾಗಿ, ಅಕ್ಕಿ, ಗೋದಿ, ತೊಗರಿಬೇಳೆ, ಕಡ್ಲೆಕಾಳು, ಶೇಂಗ, ಅಲಸಂದೆ ಕಾಳು, ಹುರುಳಿಕಾಳು, ಹೆಸರು ಕಾಳು, ಸಕ್ಕರೆ, ಬೆಲ್ಲ, ಮೊಟ್ಟೆ, ಸೂರ್ಯಕಾಂತಿ ಎಣ್ಣೆ ಹಾಗೂ ನಂದಿನಿ ತುಪ್ಪದ ಪ್ಯಾಕೇಟ್‌ಗಳನ್ನು ಅಷ್ಟೂ ಕುಟುಂಬಗಳಿಗೆ ನೀಡಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಸಲರು ಮತ್ತು ಗೌಡಲು ಸಮುದಾಯದ 5 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಾಗ್ರಿಯ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿದೆ. ಉತ್ತಮ
ಗುಣಮಟ್ಟದ ಆಹಾರ ಸಾಮಾಗ್ರಿ ನೀಡಬೇಕು ಎಂಬ ಷರತ್ತನ್ನು ಸರ್ಕಾರ ವಿಧಿಸಿದೆ. ಆದರೆ,
ಪೌಷ್ಟಿಕ ಆಹಾರವೇ ಅಪೌಷ್ಟಿಕತೆಯಿಂದ ಕೂಡಿದೆ ಎಂಬುದು ಆದಿವಾಸಿಗಳ ಆರೋಪ.
ಪೌಷ್ಟಿಕ ಆಹಾರದಡಿ ವಿತರಿಸಲಾಗುತ್ತಿರುವ ಅಡುಗೆ ಎಣ್ಣೆಯು ಅತ್ಯಂತ ಕಳಪೆಯಾಗಿದ್ದು, ಯಾರೂ ಕೇಳಿಲ್ಲದ ಹೆಸರುಗಳ ಕಂಪನಿಯ ಪ್ಯಾಕೆಟ್ ಪೂರೈಸಲಾಗುತ್ತಿದೆ. ಒಡೆದು ಹೋದ ಪ್ಯಾಕೆಟ್‌ಗಳು, ನೀರು ಜಿನುಗುವ ಬೆಲ್ಲ, ಹಾಳಾದ ಕಾಳುಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಕೇಳಿದರೆ ಗದರಿಸಿ ಕಳುಹಿಸಲಾಗುತ್ತಿದೆ ಎಂದು ದೂರುತ್ತಾರೆ.
‘ಪ್ರತಿ ತಿಂಗಳು ಆಹಾರ ಪೂರೈಸಬೇಕೆಂಬ ನಿಯಮ ಇದ್ದರೂ ಎರಡು– ಮೂರು ತಿಂಗಳಿಗೊಮ್ಮೆ ವಿತರಣೆ ಮಾಡಲಾಗುತ್ತಿದೆ. ಆಹಾರ ಸಾಮಗ್ರಿ ಪೂರೈಸುವ ಜವಾಬ್ದಾರಿಯನ್ನು ರಾಜ್ಯ ಮಟ್ಟದಲ್ಲಿ ಟೆಂಡರ್ ಮಾಡಲಾಗಿದೆ. ಇದರಿಂದ ಸಮಸ್ಯೆ ಹೆಚ್ಚಾಗಿದೆ’ ಎಂದು ಆದಿವಾಸಿ ಹೋರಾಟಗಾರರು ಹೇಳುತ್ತಾರೆ.
ರಸಗೊಬ್ಬರದ ಚೀಲದಲ್ಲಿ ಆಹಾರ ಪದಾರ್ಥ ‘ಸೋಮವಾರವಷ್ಟೇ ಆಹಾರ ಪದಾರ್ಥಗಳ ದಾಸ್ತಾನು ಬಂದಿದ್ದು ಬೆಲ್ಲ ನೀರಾಗಿದೆ. ರಾಸಾಯನಿಕ ಗೊಬ್ಬರದ ಚೀಲಗಳಲ್ಲಿ ಆಹಾರ ಪದಾರ್ಥ ತುಂಬಿಕೊಂಡು ಬರಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಯಾರೂ ಉತ್ತರ ನೀಡುವುದಿಲ್ಲ’ ಎಂದು ಬಾಳೆಹೊನ್ನೂರು ಸಮೀಪದ ಬನ್ನೂರಿನ ಹಸಲರ ಸಮುದಾಯದ ಗೋಪಾಲ್ ಬೇಸರ ವ್ಯಕ್ತಪಡಿಸಿದರು. ‘ಮೂರು ತಿಂಗಳಿಂದ ಆಹಾರ ಪದಾರ್ಥ ಪಡೆಯುತ್ತಿದ್ದೇನೆ. ಮೊದಲಿಗೆ ಸೂರ್ಯಕಾಂತಿ ಎಣ್ಣೆ ಕೆಂಪು ಬಣ್ಣದಲ್ಲಿತ್ತು. ಈ ತಿಂಗಳು ನೀಡಿರುವ ಸಾಮಾಗ್ರಿ ಗುಣಮಟ್ಟ ಸುಧಾರಿಸಿದೆ’ ಎಂದು ಕಳಸದ ಶೋಭಾ ಗೌಡಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.