ADVERTISEMENT

ಕಾಫಿನಾಡು: ಚೇತರಿಕೆ ಹಾದಿಯಲ್ಲಿ ಪ್ರವಾಸೋದ್ಯಮ

ಪ್ರೇಕ್ಷಣೀಯ ತಾಣಗಳಲ್ಲಿ ಪ್ರವಾಸಿಗರ ಕಲರವ ಶುರು

ಬಿ.ಜೆ.ಧನ್ಯಪ್ರಸಾದ್
Published 6 ಸೆಪ್ಟೆಂಬರ್ 2020, 8:22 IST
Last Updated 6 ಸೆಪ್ಟೆಂಬರ್ 2020, 8:22 IST
ಮೂಡಿಗೆರೆ ತಾಲ್ಲೂಕಿನ ದೇವರಮನೆ ಬೆಟ್ಟದಲ್ಲಿ ಪ್ರವಾಸಿಗರ ಉಲ್ಲಾಸ–ಉತ್ಸಾಹ ಪ್ರಜಾವಾಣಿ ಚಿತ್ರ/ಎ.ಎನ್‌.ಮೂರ್ತಿ
ಮೂಡಿಗೆರೆ ತಾಲ್ಲೂಕಿನ ದೇವರಮನೆ ಬೆಟ್ಟದಲ್ಲಿ ಪ್ರವಾಸಿಗರ ಉಲ್ಲಾಸ–ಉತ್ಸಾಹ ಪ್ರಜಾವಾಣಿ ಚಿತ್ರ/ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ಕಾಫಿನಾಡಿನ ಪ್ರೇಕ್ಷಣೀಯ ತಾಣಗಳಲ್ಲಿ ಪ್ರವಾಸಿಗರ ಕಲರವ ಚಿಗುರಲು ಶುರುವಾಗಿದೆ. ಲಾಕ್‌ಡೌನ್‌ ನಿರ್ಬಂಧದಿಂದಾಗಿ ಆರೇಳು ತಿಂಗಳಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ ಈಗ ಚೇತರಿಕೆಯತ್ತ ಮುಖ ಮಾಡಿದೆ.

ಜಿಲ್ಲಾಡಳಿತವು ನಿರ್ಬಂಧ ಸಡಿಲಿಸಿ ಆ.29ರಿಂದ ಪ್ರವಾಸಿಗರಿಗೆ ಕಾಫಿನಾಡು ದರ್ಶನಕ್ಕೆ ಷರತ್ತು ಬದ್ಧ ಅವಕಾಶ ಕಲ್ಪಿಸಿದೆ. ಮಾಸ್ಕ್‌ ಕಡ್ಡಾಯ ಧಾರಣೆ, ಸ್ಯಾನಿಟೈಸರ್‌ ಬಳಕೆ, ಗುಂಪುಗೂಡಬಾರದು ಮೊದಲಾದ ಷರತ್ತುಗಳನ್ನು ವಿಧಿಸಲಾಗಿದೆ. ಪ್ರವಾಸಿಗರು ತಾಣಗಳಿಗೆ ಭೇಟಿ ನೀಡುವುದು ಮತ್ತೆ ಶುರುವಾಗಿದೆ.

ಹೋಂ ಸ್ಟೆ, ರೆಸಾರ್ಟ್‌, ಲಾಡ್ಜ್‌, ಹೋಟೆಲ್‌ ಮೊದಲಾದವುಗಳ ಆದಾ ಯದ ಮೂಲ ಪ್ರವಾಸಿಗರು. ಜಿಲ್ಲೆ ಪ್ರವಾಸಕ್ಕೆ ಈಗ ಅವಕಾಶ ಕಲ್ಪಿಸಿರು ವುದರಿಂದ ಉದ್ಯಮ ಅವಲಂಬಿಸಿ ರುವವರಿಗೆ ಆಶಾಕಿರಣ ಮೂಡಿದೆ.

ADVERTISEMENT

ಪ್ರಾಕೃತಿಕ, ಸಾಂಸ್ಕೃತಿಕ ರಮ ಣೀಯ ತಾಣಗಳು ಜಿಲ್ಲೆಯಲ್ಲಿವೆ. ಮುಳ್ಳ ಯ್ಯನ ಗಿರಿ, ಬಾಬಾಬುಡನ್‌ ಗಿರಿ, ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿ, ಕುದುರೆ ಮುಖ, ದೇವರಮನೆ, ಹಿರೇಮಗ ಳೂರು, ಬೆಳವಾಡಿ, ಹೊರನಾಡು, ಕಳಸ, ಅಮೃತಾಪುರ, ಶೃಂಗೇರಿ ಮೊದಲಾದ ತಾಣಗಳಿವೆ. ಕಿಗ್ಗಾ, ಸೂತನಬ್ಬಿ, ಸಿರಿಮನೆ, ಹೆಬ್ಬೆ, ಮಾಣಿಕ್ಯ ಧಾರಾ ಮುಂತಾದ ಜಲಪಾತಗಳಿವೆ.

ಪ್ರವಾಸಿ ತಾಣ ಕಣ್ತುಂಬಿ ಕೊಳ್ಳಲು, ಹವಾಮಾನ ಸವಿಯಲು ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೊರ ಜಿಲ್ಲೆ, ಮಹಾನಗರಗಳ ಐಟಿ, ಬಿಟಿ ಮಂದಿ, ಇತರರು ವಾರಾಂತ್ಯದಲ್ಲಿ ಕಾಫಿನಾಡಿಗೆ ಬಂದು ಎರಡ್ಮೂರು ದಿನ ತಂಗಿದ್ದು ವಾಪಸಾಗು ಪರಿಪಾಟ ಇತ್ತು. ವಾರಾಂತ್ಯದ ದಿನಗಳಲ್ಲಂತೂ ಜಿಲ್ಲೆಯಲ್ಲಿ ಪ್ರವಾಸಿಗರು ಗಿಜಿಗುಡುತ್ತಿದ್ದರು. ಕೋವಿಡ್‌ನಿಂದಾಗಿ ಈ ಕಲರವ ಮರೆಯಾಗಿತ್ತು.

ಪ್ರವಾಸೋದ್ಯಮ ಇಲಾಖೆ ಅಂಕಿ–ಅಂಶದಂತೆ 2014ರಲ್ಲಿ 8.2 ಲಕ್ಷ, 2015ರಲ್ಲಿ 7.4 ಲಕ್ಷ, 2016ರಲ್ಲಿ 8.32 ಲಕ್ಷ, 2017ರಲ್ಲಿ 8.43 ಲಕ್ಷ, 2018ರಲ್ಲಿ 8.29 ಲಕ್ಷ, 2019ರಲ್ಲಿ 8.42 ಲಕ್ಷ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ‌

‘ಮೂರ್ನಾಲ್ಕು ತಿಂಗಳಿಗೊಮ್ಮೆ ಕಾಫಿನಾಡಿಗೆ ಬಂದು ಇಲ್ಲಿ ಎರಡ್ಮೂರು ದಿನ ಕಾಲ ಕಳೆಯವುದು, ಪ್ರಾಣಿ ಪಕ್ಷಿ ಸ್ಥಳಗಳ ಫೋಟೊ ಕ್ಲಿಕ್ಕಿಸುವುದು ಏಳೆಂಟು ವರ್ಷಗಳಿಂದ ಮಾಮೂಲಿ ಹವ್ಯಾಸವಾಗಿದೆ. ಕೋವಿಡ್‌ನಿಂದಾಗಿ ಕೆಲ ತಿಂಗಳಿನಿಂದ ಇಲ್ಲಿಗೆ ಬರಲು ಆಗಿರಲಿಲ್ಲ. ಬಂದಿರಲಿಲ್ಲ. ನಿರ್ಬಂಧ ತೆರವು ಗೊಳಿಸಿದ್ದರಿಂದ ಈಗ ಬಂದಿ ದ್ದೇವೆ. ಇಲ್ಲಿನ ಹಸಿರು ವನರಾಶಿಯ ನಡುವೆ ವಿಹರಿಸಿದರೆ ಮನಸ್ಸು ಉಲ್ಲಸಿತ ವಾಗುತ್ತದೆ’ ಎಂದು ಬೆಂಗಳೂರಿನ ವಿ–ಟೆಕ್‌ ಸಂಸ್ಥೆ ಉದ್ಯೋಗಿ ಆರ್‌.ವಿ.ಮನ ಸ್ವಿನಿ ಪ್ರವಾಸಸಿರಿ ಹಂಚಿಕೊಂಡರು.

‘ಐದು ತಿಂಗಳಿಂದ ವ್ಯಾಪಾರ ಬಿಟ್ಟು ಕೂಲಿಗೆ ಹೋಗುತ್ತಿದ್ದೆ. ಒಂದು ವಾರದಿಂದ ಪ್ರವಾಸಿಗರು ಬರುವುದು ಶುರುವಾಗಿದೆ. ಹಸಿ ಮೆಕ್ಕೆಜೋಳ ತೆನೆ, ಹಣ್ಣಿನ ವ್ಯಾಪಾರ ಮತ್ತೆ ಆರಂಭಿಸಿದ್ದೇನೆ. ಎಲ್ಲ ಮೊದಲಿನಂತೆ ಆಗಿ ಪ್ರವಾಸಿಗರು ಜಾಸ್ತಿ ಬರಲು ಶುರುವಾದರೆ ವ್ಯಾಪಾರದಲ್ಲಿ ದಿನಕ್ಕೆ ₹ 400ರಿಂದ 500 ದುಡಿಮೆಯಾಗುತ್ತೆ’ ಎಂದು ತಳ್ಳುಗಾಡಿ ವ್ಯಾಪಾರಿ ರಾಮಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.