ADVERTISEMENT

ಮಕ್ಕಳು ನಾಡು–ನುಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ: ಮನಸುಳಿ ಮೋಹನ್

ಸದ್ವಿದ್ಯಾ ಶಾಲೆಯಲ್ಲಿ ರಸಋಷಿ ಕುವೆಂಪು ರಚಿತ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:15 IST
Last Updated 17 ಡಿಸೆಂಬರ್ 2025, 7:15 IST
ತರೀಕೆರೆ ಪಟ್ಟಣದ ಸದ್ವಿದ್ಯಾ ಶಾಲೆಯ ಕಾರ್ಯಕ್ರಮವನ್ನು ಸಮಾಜ ಚಿಂತಕ ಮನಸುಳಿ ಮೋಹನ್‌ ಉದ್ಘಾಟಿಸಿದರು
ತರೀಕೆರೆ ಪಟ್ಟಣದ ಸದ್ವಿದ್ಯಾ ಶಾಲೆಯ ಕಾರ್ಯಕ್ರಮವನ್ನು ಸಮಾಜ ಚಿಂತಕ ಮನಸುಳಿ ಮೋಹನ್‌ ಉದ್ಘಾಟಿಸಿದರು   

ತರೀಕೆರೆ: ‘ಮಕ್ಕಳು ಶಿಸ್ತು, ಸಂಯಮದಿಂದ ಗುರು–ಹಿರಿಯರಿಗೆ ಗೌರವ ಕೊಡುವ ಜೊತೆಗೆ ನಾಡು–ನುಡಿ ಬಗೆಗಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸತ್ಪ್ರಜೆಗಳಾಗಬೇಕು’ ಎಂದು ಸಮಾಜ ಚಿಂತಕ ಮನಸುಳಿ ಮೋಹನ್ ಕಿವಿಮಾತು ಹೇಳಿದರು.

ಪಟ್ಟಣದ ಸದ್ವಿದ್ಯಾ ಶಾಲೆಯಲ್ಲಿ ಕಸಾಪ ಮಹಿಳಾ ಘಟಕ, ದಾಸ ಸಾಹಿತ್ಯ ಪರಿಷತ್, ಸದ್ವಿದ್ಯಾ ಶಾಲೆ ಆಶ್ರಯದಲ್ಲಿ ನಡೆದ ರಸಋಷಿ ಕುವೆಂಪು ರಚಿಸಿದ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ನಮ್ಮ ನಾಡು–ನುಡಿ ಬಗ್ಗೆ ಹೆಮ್ಮೆಯ ವಿಚಾರಗಳನ್ನು ಶಾಲೆಗಳಲ್ಲಿ ಪಠ್ಯದೊಂದಿಗೆ ಅಥವಾ ಪಠ್ಯೇತರ ಚಟುವಟಿಕೆ ಮೂಲಕ ತಿಳಿಸಿಕೊಡಬೇಕು. ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಒಂದು ಸೌಭಾಗ್ಯ. ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಶಾಲೆ ಮುಖ್ಯಸ್ಥೆ ಹರ್ಷಿಣಿ ಕುಮಾರ್ ಮಾತನಾಡಿ, ‘ಕನ್ನಡ ನಾಡು ಕಟ್ಟುವಲ್ಲಿ ಮಕ್ಕಳ ಪಾತ್ರ ಮುಖ್ಯ. ನಾಡಗೀತೆಗೆ 100 ವರ್ಷವಾಗಿದೆ. ಇನ್ನು ಮುಂದೆಯೂ ಸಹ ಕನ್ನಡಿಗರೆಲ್ಲರ ಮನ ತಲುಪಬೇಕು. ಶತಕಂಠ ಗಾಯನ ಸಹಸ್ರ ಕಂಠಗಳಲ್ಲಿ ಮೊಳಗಬೇಕು. ಇಂದು ನಮ್ಮ ಶಾಲೆಯಲ್ಲಿ ನಾಡಗೀತೆ ಶತವಸಂತ ಸಂಭ್ರಮಾಚರಣೆ ನೆರವೇರಿದ್ದು, ನಮ್ಮ ಶಾಲಾ ಆವರಣ ಪಾವನವಾಯಿತು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್ ಮಾತನಾಡಿ, ‘ಇಂದು ನಾವೆಲ್ಲರೂ ಇಲ್ಲಿ ಒಂದು ಭಾವಪೂರ್ಣ ಕ್ಷಣಕ್ಕೆ ಸಾಕ್ಷಿಗಳಾಗಿದ್ದೇವೆ. ನಾಡಗೀತೆ ಕೇವಲ ಒಂದು ಹಾಡಲ್ಲ, ಇದು ನಮ್ಮ ನಾಡಿನ ಅಸ್ತಿತ್ವ ಹಾಗೂ ಅಭಿಮಾನದ ಪ್ರತೀಕ. ಕವಿ ಕುವೆಂಪು ರಚಿಸಿರುವ ‘ಜಯ ಭಾರತ ಜನನಿಯ ತನುಜಾತೆ’ ಗೀತೆ ಹಾಡುವಾಗ, ಕೇಳುವಾಗ ನಮ್ಮಲ್ಲಿ ಅರ್ಪಣಾಭಾವ ಮೂಡುತ್ತದೆ. ಅದರಲ್ಲಿ ತಾಯಿ ಮಮತೆ, ನಾಡಿನ ಗೌರವ ಇದೆ. ಹಾಗೆಯೇ ಈ ಸಂದರ್ಭದಲ್ಲಿ ಶತಕಂಠದಿಂದ ಶತ ವಸಂತ ಕಂಡ ನಾಡಗೀತೆಯನ್ನು ಶಾಲೆ ಮಕ್ಕಳೊಂದಿಗೆ ಹಾಡಿದ್ದು, ಇಲ್ಲಿನ ಪರಿಸರದೊಂದಿಗೆ ಮಾರ್ಧನಿಸಿದ್ದು, ತಾಯಿ ಭುವನೇಶ್ವರಿ ಉತ್ಸವ ನೆರವೇರಿಸಿ ಪುಷ್ಪ ನಮನ ಸಲ್ಲಿಸಿರುವುದು ಧನ್ಯತೆ ಮೂಡಿಸಿದೆ ಎಂದರು.

ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಶ್ರೀ ಬಿ.ಎಸ್. ಭಗವಾನ್ ಅವರನ್ನು ಕಸಾಪ, ದಾಸ ಸಾಹಿತ್ಯ ಪರಿಷತ್, ಶಾಲೆಯಿಂದ ಸನ್ಮಾನಿಸುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ. ಭಗವಾನ್ ಅವರು ನಾಡಗೀತೆಯನ್ನು ಅವರದೇ ಆದ ಮಧುರ ಶೈಲಿಯಲ್ಲಿ ಇಂಪಾಗಿ ಅನೇಕ ಸರ್ಕಾರಿ ಸಮಾರಂಭ, ಕಸಾಪ ಕಾರ್ಯಕ್ರಮ, ಸಮ್ಮೇಳನಗಳಲ್ಲಿ 400ಕ್ಕೂ ಹೆಚ್ಚು ಬಾರಿ ಹಾಡಿದ್ದಾರೆ. ನಾಡಗೀತೆ ಅಂದ ತಕ್ಷಣ ನೆನಪಾಗುವುದು ಭಗವಾನ್ ಎಂದರೆ ಅತಿಶಯೋಕ್ತಿ ಅಲ್ಲ, ಇವರನ್ನು ಗೌರವಿಸುವುದೇ ಪುಣ್ಯ ಎಂದು ಅವರು ಹೇಳಿದರು. 

ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ಯುಗದ ಕವಿ, ರಸಋಷಿ, ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯಲ್ಲಿ ಕನ್ನಡ ನಾಡಿನ ಇತಿಹಾಸ, ಭವ್ಯ ಪರಂಪರೆ ಹಾಗೂ ಭೌಗೋಳಿಕ ವೈಶಿಷ್ಟ್ಯ ಮತ್ತು ಚಾರಿತ್ರಿಕ ವೈಭವವನ್ನು ಕವಿಗಳು ಅನಾವರಣಗೊಳಿಸಿ ದಾಖಲಿಸಿದ್ದಾರೆ. ಇಂತಹ ಅದ್ಭುತ ರಚನೆಯನ್ನು ಸರ್ಕಾರ ನಾಡಗೀತೆಯಾಗಿ ಅಂಗೀಕರಿಸಿರುವುದು ಸ್ತುತ್ಯಾರ್ಹ. ಕವಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಗೆ 150 ವರ್ಷಗಳಾಗಿದೆ ಎಂದು ಗಾಯನ ಸ್ಮರಿಸುತ್ತ ಭಾವಪೂರ್ಣವಾಗಿ ನೆರವೇರಿಸಿದರು.

ಸಾಹಿತಿ ಮರಳುಸಿದ್ದಯ್ಯ ಪಟೇಲ್ ಶುಭಾಶಯ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಶ್ಯಾಮಲಾ ಮಂಜುನಾಥ್ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲತಾ ಗೋಪಾಲಕೃಷ್ಣ, ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್, ಉಮಾ ದಯಾನಂದ, ಲಕ್ಷ್ಮಿ ಭಗವಾನ್, ಭವ್ಯ ರೇವಣ್ಣ, ಸಹನಾ ರಾಘವೇಂದ್ರ, ಸದ್ವಿದ್ಯಾ ಶಾಲೆ ಮಕ್ಕಳು ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.