ADVERTISEMENT

ಕಾಫಿ ಬೆಳೆಗೆ ಕೊಳೆರೋಗ ಬಾಧೆ

ಮಲೆನಾಡಿನಲ್ಲಿ ಸತತ ಮಳೆ– ಆತಂಕದಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 4:38 IST
Last Updated 14 ಸೆಪ್ಟೆಂಬರ್ 2021, 4:38 IST
ಬಣಕಲ್‍ನ ವನಶ್ರೀ ಲಕ್ಷ್ಮಣಗೌಡ ಅವರ ಕಾಫಿ ತೋಟದಲ್ಲಿ ಕಾಯಿ ಕೊಳೆ ರೋಗಕ್ಕೆ ತುತ್ತಾಗಿ ಉದುರಿರುವುದು
ಬಣಕಲ್‍ನ ವನಶ್ರೀ ಲಕ್ಷ್ಮಣಗೌಡ ಅವರ ಕಾಫಿ ತೋಟದಲ್ಲಿ ಕಾಯಿ ಕೊಳೆ ರೋಗಕ್ಕೆ ತುತ್ತಾಗಿ ಉದುರಿರುವುದು   

ಕೊಟ್ಟಿಗೆಹಾರ: ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ, ಬೆಳೆಗಳಿಗೆ ಕೊಳೆರೋಗ ಬಾಧಿಸಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ.

ಕಳೆದ ವಾರದಿಂದ ಪ್ರತಿನಿತ್ಯ ಮಳೆ ಆಗುತ್ತಿರುವುದರಿಂದ ಹೇಮಾವತಿ ನದಿ ಸೇರುವ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದ ಕಾಫಿನಾಡಿನ ರೈತರು ಹೈರಾಣಾರಾಗಿದ್ದು ಬೆಳೆ ನಷ್ಟದಿಂದ ವ್ಯಥೆ ಪಡುವಂತಾಗಿದೆ. ಮಳೆಯಿಂದ ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಉದುರುತ್ತಿದ್ದು ಅದನ್ನು ಹೆಕ್ಕಿ ಒಣಗಿಸಲಾಗದೆ ಬೆಳೆಗಾರರು ಅಸಹಾಯಕರಾಗಿದ್ದಾರೆ.

ರೈತ ಸಂಘದ ರಾಜ್ಯ ಘಟಕದ ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣ್‍ಗೌಡ ಮಾಹಿತಿ ನೀಡಿ, ‘ಅತಿವೃಷ್ಟಿ ಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಡಿಗೆರೆ ತಾಲ್ಲೂಕು ಅತಿವೃಷ್ಟಿಯ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬೆಳೆವಿಮೆ ಹಾಗೂ ಪರಿಹಾರ ನೀಡುವ ಅಗತ್ಯವಿದೆ. ಅರೇಬಿಕಾ ಕಾಫಿಯಂತೂ ತೋಟದಲ್ಲಿ ಉದುರಿ ಅಪಾರ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಮಾತನಾಡಿ, ‘ಅತಿಯಾದ ಮಳೆಯಿಂದ ಕಾಫಿನಾಡು ಶೀತದಿಂದ ಕೂಡಿದ್ದು ಕಾಫಿ, ಮೆಣಸು, ಅಡಿಕೆ ಮತ್ತಿತರ ಬೆಳೆಗಳು ನೆಲಕಚ್ಚುತ್ತಿವೆ. ಅತಿಯಾದ ಮಳೆಗೆ ಬೆಳೆಗೆ ಕೊಳೆರೋಗ ತಗುಲಿದೆ. ಅಕಾಲಿಕ ಮಳೆಗೆ ಅರೇಬಿಕಾ
ಮೊದಲೇ ಹಣ್ಣಾದ ಕಾರಣ ಕಾಫಿ ಒಣಗಿಸಲಾಗದೆ ಅಪಾರ ನಷ್ಟ ಉಂಟಾಗಿದೆ. ಕಾಡು ಪ್ರಾಣಿಗಳಿಂದಲೂ ಸತತವಾಗಿ ಬೆಳೆಹಾನಿ ಆಗಿದೆ. ಸರ್ಕಾರ ಪರಿಹಾರ ನೀಡಿ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.