
ಬಾಳೆಹೊನ್ನೂರು ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉಧ್ಘಾಟಿಸಿದರು.
ಬಾಳೆಹೊನ್ನೂರು: ಕಾಫಿ ಮೂಲತಹ ನಮ್ಮ ದೇಶದಲ್ಲ. ಆದರೆ ಈಗ ನಮ್ಮ ಆಹಾರದ ಭಾಗವಾಗಿ ಪರಿವರ್ತನೆಗೊಂಡಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಪಟ್ಟಿಯಲ್ಲಿ ಭಾರತಕ್ಕೆ ಏಳನೇ ಸ್ಥಾನ, ರಫ್ತಿನಲ್ಲಿ 5ನೇ ಸ್ಥಾನ ಪಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.
ಕಾಫಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಮಾರುಕಟ್ಟೆಯ ಅಧ್ಯಯನ ನಡೆಸಿ ಅಗತ್ಯ ಹೆಚ್ಚಿರುವ ದೇಶಗಳಿಗೆ ಹೆಚ್ಚು ಕಾಫಿ ರಪ್ತು ಮಾಡುವ ಚಿಂತನೆ ಮಾಡಬೇಕು. ಕಾಫಿ ಮೇಲಿನ ಜಿಎಸ್‌ಟಿಯನ್ನು ಸರ್ಕಾರ ಶೇ 18ರಿಂದ 5ಕ್ಕೆ ಇಳಿಸಿದೆ. 2024-25ರಲ್ಲಿ 3.63 ಟನ್ ಉತ್ಪಾದನೆ ಆಗಿದ್ದು, ಈ ಪೈಕಿ ಶೇ70 ರಷ್ಟು ರಫ್ತಾಗಿದೆ. ಜಗತ್ತಿನಾದ್ಯಂತ ಭಾರತದ ಕಾಫಿಗೆ ಬೇಡಿಕೆ ಹೆಚ್ಚಾಗಿದೆ. ಭಾರತ ಅರ್ಥಿಕತೆಯಲ್ಲಿ ಜಗತ್ತಿನ 4ನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಕೇಂದ್ರ ಸರ್ಕಾರ ಮೂಲ ಸೌಲಭ್ಯಕ್ಕೆ ಹೆಚ್ಚು ಖರ್ಚು ಮಾಡುತ್ತಿದೆ. ಜಪಾನಿನಲ್ಲಿ ಟೀಯಿಂದ ಕಾಫಿಗೆ ಜನರು ಬದಲಾಗುತ್ತಿದ್ದಾರೆ. ನಮ್ಮ ಸ್ಕಿಲ್, ಸ್ಕೇಲ್‌ಗಳನ್ನು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಕಾಫಿಗೆ ಉತ್ತಮ ಬೆಲೆ ಬಂದಿದೆ. ಆದರೆ ಹವಾಮಾನ ವೈಪರೀತ್ಯ, ರೋಗಗಳಿಂದಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಮಣ್ಣು ಶಕ್ತಿ ಕಳೆದುಕೊಳ್ಳುತ್ತಿದೆ. ಮಣ್ಣಿನ ಶಕ್ತಿ ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಿದ್ದು ಸಂಶೋಧನಾ ಕೇಂದ್ರ ಯಾಂತ್ರೀಕರಣ ಅವಿಷ್ಕಾರದತ್ತ ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು.
ಅರೇಬಿಕಾ ವರ್ಗದ ಎರಡು ಹೊಸ ಕಾಫಿ ತಳಿ,ಕಾಫಿ ಕ್ಯಾಪ್ಸೂಲ್, ಮೈಕ್ರೋ ನ್ಯೂಟ್ರೆಂಟ್ ಒಳಗೊಂಡ ಸ್ಪ್ರೇ ಹಾಗೂ ಕೃಷಿ ಕ್ಷೇತ್ರದ ನೂರು ವಿಶೇಷತೆಗಳ ಕುರಿತ ಕೃಷಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಟಿ.ಡಿ.ರಾಜೇಗೌಡ, ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಸಿಇಒ ಕೂರ್ಮಾರಾವ್, ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಕುಮಾರ್ ಯಾದವ್, ನಿರ್ದೇಶಕ ಸೆಂಥಿಲ್ ಕುಮಾರ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಊಟಕ್ಕೆ ಪರದಾಟ
ದೂರದ ದೆಹಲಿ ಅಸ್ಸಾಂ ಡಾರ್ಜಿಲಿಂಗ್ ಸೇರಿದಂತೆ ರಾಷ್ಟ್ರದ ನಾನಾ ಭಾಗಗಳಿಂದ ಶತಮಾನೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಮಧ್ಯಾಹ್ನ ಸರಿಯಾದ ಊಟ ಸಿಗದೆ ಪರದಾಡಿದರು. ಸಾರ್ವಜನಿಕರು ಹಣ ಕೊಟ್ಟು ಊಟ ಪಡೆಯಲು ದೂರದಲ್ಲಿ ಜಾಗ ನಿಗದಿಪಡಿಸಿದ್ದು ಕೂಡ ಆಕ್ರೋಶಕ್ಕೆ ಕಾರಣವಾಯಿತು. ಸೀಗೋಡು ಬಳಿಯೇ ವಾಹನಗಳನ್ನು ನಿಲ್ಲಿಸಲು ಮೈದಾನವನ್ನು ಬಳಸಲಾಗಿತ್ತು. ವಿಐಪಿಗಳಿಗೆ ಮೀಸಲಾಗಿದ್ದ ಊಟದ ಹಾಲ್‌ನಲ್ಲಿ ನಿರೀಕ್ಷೆಗಿಂತ ಅಧಿಕ ಜನ ಸೇರಿದ್ದು ಭಾರಿ ಉದ್ದುದ್ದ ಸಾಲು ಕಂಡು ಬಂತು. ಕೆಲವರು ಅಲ್ಲಿ ಹಣ ನೀಡಿ ಊಟ ಪಡೆದರು. ಜನ ಜಾಸ್ತಿಯಾಗುತ್ತಿದ್ದಂತೆ ಹಲವು ಬಗೆಯ ಭಕ್ಷ್ಯಗಳು ಖಾಲಿಯಾಗಿದ್ದವು. ದುಡ್ಡು ಕೊಟ್ಟು ಊಟಕ್ಕೆ ಬಂದಿದ್ದ ಬೆಳೆಗಾರರು ರೊಚ್ಚಿಗೆದ್ದರು. ದುಡ್ಡು ಕೊಟ್ಟು ಬಂದರೂ ಸರಿಯಾಗಿ ಊಟ ಕೊಡುತ್ತಿಲ್ಲ. ಮತ್ತೆ ಯಾಕ್ರೀ ಕೌಂಟರ್ ಹಾಕಿದ್ದಾರಾ? ಸಾವಿರಾರು ಕೋಟಿ ವ್ಯವಹಾರ ನಡೆಸುವ ಕಾಫಿ ಸಂಸ್ಥೆಗೆ ಸಾರ್ವಜನಿಕರಿಗೆ ಊಟ ಹಾಕುವ ಶಕ್ತಿ ಇಲ್ಲವೆ? ಇಲ್ಲಿ ಅವ್ಯವಸ್ಥೆ ತುಂಬಿ ಹೋಗಿದೆ ಎಂದು ಕೂಗಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.