ADVERTISEMENT

ಡಿ. 20ರಿಂದ ಕಾಫಿ ಸಂಶೋಧನಾ ಕೇಂದ್ರದಲ್ಲಿ ಶತಮಾನೋತ್ಸವ  

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:46 IST
Last Updated 14 ಡಿಸೆಂಬರ್ 2025, 7:46 IST
ಬಾಳೆಹೊನ್ನೂರು ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಅಚರಿಸುತ್ತಿರುವ ಹಿನ್ನೆಲೆ ಕಾಫಿ ಮಂಡಳಿ ಇತಿಹಾಸದ ಮಾಹಿತಿ ಕೋಶವನ್ನು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಸೆಂಥಿಲ್ ಕುಮಾರ್, ಜಂಟಿ ನಿರ್ದೇಶಕ ಸಿ.ಬಾಬು ಬಿಡುಗಡೆಗೊಳಿಸಿದರು
ಬಾಳೆಹೊನ್ನೂರು ಸಮೀಪದ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರ ಶತಮಾನೋತ್ಸವ ಅಚರಿಸುತ್ತಿರುವ ಹಿನ್ನೆಲೆ ಕಾಫಿ ಮಂಡಳಿ ಇತಿಹಾಸದ ಮಾಹಿತಿ ಕೋಶವನ್ನು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಸೆಂಥಿಲ್ ಕುಮಾರ್, ಜಂಟಿ ನಿರ್ದೇಶಕ ಸಿ.ಬಾಬು ಬಿಡುಗಡೆಗೊಳಿಸಿದರು   

ಬಾಳೆಹೊನ್ನೂರು: ‘ಡಿ. 20ರಿಂದ 23ರವರೆಗೆ ಕಾಫಿ ಸಂಶೋಧನಾ ಕೇಂದ್ರದ ‘ಶತಮಾನೋತ್ಸವ’ ಸಮಾರಂಭ‌ ₹3.5 ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ದೇಶದ ಮೂಲೆ ಮೂಲೆಗಳಿಂದ 30 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಸೆಂಥಿಲ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1925ರ ಡಿ. 15ರಂದು ‘ಮೈಸೂರು ಕಾಫಿ ಎಕ್ಸಪರಿಮೆಂಟ್ ಸ್ಟೇಷನ್’ ಎಂಬ ಹೆಸರಿನಲ್ಲಿ ಕೊಪ್ಪದಲ್ಲಿ ಪ್ರಥಮವಾಗಿ ಆರಂಭಗೊಂಡ ಕೇಂದ್ರ 1927ರಲ್ಲಿ ಸೀಗೋಡಿಗೆ ವರ್ಗಾವಣೆಗೊಂಡಿದ್ದು, ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ದೇಶದಲ್ಲಿ 4 ಲಕ್ಷ ಕಾಫಿ ಬೆಳೆಗಾರರಿದ್ದು, 10 ಲಕ್ಷ ಕುಟುಂಬ ಕಾಫಿಯನ್ನು ಅವಲಂಬಿಸಿದೆ. ಉತ್ಪಾದನೆಯ ಶೇ 80ರಷ್ಟು ವಿದೇಶಗಳಿಗೆ ರಪ್ತಾಗುತ್ತಿದೆ’ ಎಂದರು.

ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳಿದ್ದು, ಆಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳ ಪ್ರದರ್ಶನ ನಡೆಯಲಿದೆ. 285 ಎಕರೆ ಪ್ರದೇಶ ಹೊಂದಿರುವ ಕಾಫಿ ಸಂಶೋಧನಾ ಕೇಂದ್ರದ ಆವರಣದಲ್ಲಿ ರೈತರಿಗೆ ಕ್ಷೇತ್ರ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಇದೂವರೆಗೆ ಸಂಶೋಧನಾ ಕೇಂದ್ರದಿಂದ 13 ಅರೇಬಿಕಾ, 3 ರೋಬೆಸ್ಟಾ ತಳಿಗಳನ್ನು ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಹೊಸದಾದ ಎರಡು ತಳಿ ಹಾಗೂ 7 ಹೊಸ ತಂತ್ರಜ್ಞಾನ ಬಿಡುಗಡೆ ಮಾಡಲಾಗುವುದು. ಜೈನ್ ಇರಿಗೇಷನ್ ಜೊತೆ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, 2026ರಿಂದ ಟಿಶ್ಯೂಕಲ್ಚರ್ ಕಾಫಿ ಗಿಡಗಳು ರೈತರಿಗೆ ಸಿಗಲಿದೆ ಎಂದರು.

ADVERTISEMENT

40 ಜನ ವಿವಿಧ ವಿಷಯ ಪರಿಣಿತರು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳ ವಾಹನ ನಿಲುಗಡೆಗೆ 3 ಹಂತದ ಸ್ಥಳ ನಿಗದಿಪಡಿಸಲಾಗಿದೆ. ಬೆಳೆಗಾರರ ವಾಹನಗಳನ್ನು ಸೀಗೊಡಿನ ನವೋದಯ ವಿದ್ಯಾಲಯದ ಆವರಣ, ನಾಗಲಕ್ಷ್ಮೀ ಸಭಾಭವನದ ಎದುರಿನ ಆಟದ ಮೈದಾನದಲ್ಲಿ ನಿಲುಗಡೆ ಮಾಡಲು ಜಾಗ ಗುರುತಿಸಿದ್ದು, ಅಲ್ಲಿಂದ ಶತಮಾನೋತ್ಸವ ಸಮಾರಂಭದ ವೇದಿಕೆವರೆಗೆ 15 ವಾಹನಗಳು ನಿರಂತರವಾಗಿ ಜನರನ್ನು ಕರೆದೊಯ್ಯಲು ಸಿದ್ಧವಾಗಿವೆ. ಅಧಿಕಾರಿಗಳು, ಪಾಸ್ ಹೊಂದಿದವರಿಗೆ ಭಾರತೀಯ ಕಾಫಿ ವಿದ್ಯಾಲಯದ ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು. ಉಳಿದಂತೆ ವಿಐಪಿಗಳಿಗೆ, ಸಚಿವರಿಗೆ, ಗಣ್ಯರಿಗೆ ಕಾಫಿ ಸಂಶೋಧನಾ ಕೇಂದ್ರದವರೆಗೂ ತೆರಳಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರು ಸಹಕರಿಸಬೇಕು. ಅತಿಥಿಗಳ ಪಟ್ಟಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೆ ವಿವರ ನೀಡುವುದಾಗಿ ಎಂದು ಅವರು ತಿಳಿಸಿದರು.

ಕಾಫಿ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.