ಬಿಳಾಲುಕೊಪ್ಪ(ಬಾಳೆಹೊನ್ನೂರು): ಅತಿ ಹೆಚ್ಚು, ಅತಿ ಕಡಿಮೆ ಮಳೆ ಬೀಳುವ ಬೆಳೆಗಾರರ ತೋಟದಲ್ಲಿ ಪ್ರತಿ ವರ್ಷ ಉತ್ತಮ ಫಸಲು ನೀಡುವ, ರೋಗ ನಿರೋಧಕ ಗುಣ ಹೊಂದಿರುವ ಯಾವುದಾದರೂ ಗಿಡಗಳಿದ್ದಲ್ಲಿ ಕಾಫಿ ಸಂಶೋಧನಾ ಕೇಂದ್ರಕ್ಕೆ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡಲ್ಲಿ ಆ ತಳಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಿ ಹೊಸ ತಳಿ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿ ಕೆ.ಪಿ.ಶ್ರೀಹರ್ಷ ತಿಳಿಸಿದರು.
ಇಂಡಿಯನ್ ಪೆಪ್ಪರ್ ಲೀಗ್ (ಐಪಿಎಲ್) ಹಾಗೂ ಕಾಫಿ ಮಂಡಳಿ ಕೊಪ್ಪ ವಿಸ್ತರಣಾ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಕಾಫಿ ಕುರಿತ ವಿಚಾರ ಸಂಕಿರಣ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕ್ಲೋನಿಂಗ್, ಟಿಶ್ಯೂಕಲ್ಚರ್ ಹಾಗೂ ಇತ್ತೀಚಿನ ದಿನಗಳಲ್ಲಿ ರೂಟ್ ಬಾಲ್ ಜನಪ್ರೀಯವಾಗುತ್ತಿದೆ. ಸೂಕ್ಷ್ಮ ಪೋಷಕಾಂಶಗಳ ಕೊರತೆಯಾದಾಗ ಗಿಡಗಳಿಗೆ ರೋಗ ಬಾಧೆ ಜಾಸ್ತಿಯಾಗುತ್ತದೆ. ಆದ್ದರಿಂದ ನಿಗದಿತ ಅವಧಿಯಲ್ಲಿ ತೋಟಕ್ಕೆ ಸೂಕ್ಷ್ಮ ಪೋಷಕಾಂಶ ನೀಡುವುದು ಅವಶ್ಯ. ಇದೂವರೆಗೂ ಕೊಳೆರೋಗ ಬಾರದ ಗಿಡಗಳು ಸಿಕ್ಕಿಲ್ಲ. ಸಂಶೋಧನಾ ಕೇಂದ್ರ ಒಟ್ಟು ಮೂವರು ವಿಧದ ಕಾಫಿ ತಳಿಗಳನ್ನು ಇದೂವರೆಗೆ ಬಿಡುಗಡೆ ಮಾಡಿದೆ ಎಂದರು.
ಐಪಿಎಲ್ ಉಪಾಧ್ಯಕ್ಷ, ಕಾಳು ಮೆಣಸು ಬೆಳೆಗಾರ ಸತ್ಯಪ್ರಕಾಶ್ ಮಾತನಾಡಿ, ಕಾಳು ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಕೊಳೆರೋಗ ಬಾರದಂತೆ ತಡೆಯಲು ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಬೇಕು. ಬಳ್ಳಿಗಳಲ್ಲಿ ಒಂದೊಂದು ಹಣ್ಣಾಗುವಾಗಲೇ ಎಲ್ಲವನ್ನೂ ಕೊಯಿಲು ಮಾಡುವುದು ಒಳ್ಳೆಯದು. ಆಗ ಮುಂದಿನ ವರ್ಷದ ಫಸಲಿನ ಮೇಲೇ ಪರಿಣಾಮ ಬೀರುವುದಿಲ್ಲ. ರೋಗ ಇರುವ ಕಾಳುಮೆಣಸು ಬಳ್ಳಿಯನ್ನು ಬುಡ ಸಮೇತ ಕಿತ್ತು ತೋಟದಿಂದ ದೂರ ಹಾಕಿ, ಆ ಜಾಗಕ್ಕೆ ಸುಣ್ಣ ಹಾಕಿ 15 ದಿನ ಬಿಟ್ಟು ಬೇರೆ ಕಾಳುಮೆಣಸಿನ ಗಿಡ ನಡೆಬಹುದು ಎಂದರು.
ಬಿಳಾಲುಕೊಪ್ಪ ಅಪ್ಪುಕೊಡಿಗೆ ಅರುಣ್ ಕುಮಾರ್ ಅವರ ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್ ಕುಮಾರ್, ಉಪಾಧ್ಯಕ್ಷ ಕೆ.ಎಸ್.ಸತ್ಯಪ್ರಕಾಶ್ ಕೆಳಕೊಡಿಗೆ, ಚಂದ್ರಶೇಖರ್ ಹೆಗ್ಡೆ ಕಲ್ಕುಳಿ, ಇಂದಿರಮ್ಮ ಎಸ್ಟೇಟ್ ಮಾಲೀಕ ಪ್ರದೀಪ್ ಜಯಪುರ, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕರಾದ ಎಚ್.ಎಂ.ಚೆನ್ನಕೇಶವ, ಎಚ್.ಆರ್.ಆದರ್ಶ, ಕಾಫಿ ಸಂಶೋಧನಾ ಕೇಂದ್ರದ ಎಸ್‌ಎಲ್‌ಒ ಪ್ರಭುಗೌಡ, ವಿಸ್ತರಣಾ ನಿರೀಕ್ಷಕ ಎಸ್.ಬಿ.ಮಂಜುನಾಥ್, ಮಹೇಶ್,ದಾದಾಫೀರ್, ವಿಜ್ಞಾನಿಗಳಾದ ಡಾ.ಚಂದ್ರಶೇಖರ್, ಡಾ.ರಂಜಿನಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.