ADVERTISEMENT

ಮಂಗನ ಕಾಯಿಲೆ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಕೈಜೋಡಿಸಿ: ಡಾ.ವಿನಯ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:13 IST
Last Updated 2 ಫೆಬ್ರುವರಿ 2025, 14:13 IST
ನರಸಿಂಹರಾಜಪುರ ತಾಲ್ಲೂಕು ಕರ್ಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಡೆದ ‘ಮಂಗನ ಕಾಯಿಲೆ ನಿಯಂತ್ರಣ ಸಮನ್ವಯ ಸಮಿತಿ ಸಭೆ’ಯಲ್ಲಿ ಮಂಗನ ಕಾಯಿಲೆ ಮುನ್ನಚ್ಚರಿಕಾ ಕ್ರಮದ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು
ನರಸಿಂಹರಾಜಪುರ ತಾಲ್ಲೂಕು ಕರ್ಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಡೆದ ‘ಮಂಗನ ಕಾಯಿಲೆ ನಿಯಂತ್ರಣ ಸಮನ್ವಯ ಸಮಿತಿ ಸಭೆ’ಯಲ್ಲಿ ಮಂಗನ ಕಾಯಿಲೆ ಮುನ್ನಚ್ಚರಿಕಾ ಕ್ರಮದ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು   

ಕರ್ಕೇಶ್ವರ(ಎನ್.ಆರ್.ಪುರ): ಮಂಗನ ಕಾಯಿಲೆ ನಿಯಂತ್ರಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಯ್ ಹೇಳಿದರು.

ಕರ್ಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಡೆದ ಮಂಗನ ಕಾಯಿಲೆ ನಿಯಂತ್ರಣ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಈ ಬಾರಿ ಮೇಲ್ಪಾಲ್ ಭಾಗದಲ್ಲಿ ಎರಡು ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್‌ನಿಂದ ಬರುವ ಕಾಯಿಲೆ ಇದಾಗಿದ್ದು, ಸೋಂಕಿತ ಉಣ್ಣೆಗಳ ಕಡಿತದಿಂದ ಮನುಷ್ಯರಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಕಾಡಿನ ನಿಕಟ ಸಂಪರ್ಕವಿರುವವರು, ಕಾಡಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಜಾನುವಾರು ಪಾಲನೆ–ಪೋಷಣೆ ಮಾಡುವವರು, ಟ್ರಕ್ಕಿಂಗ್ ಮಾಡುವವರು ಈ ಕಾಯಿಲೆಗೆ ತುತ್ತಾಗುತ್ತಾರೆ ಎಂದರು.

ADVERTISEMENT

ತೀವ್ರ ಜ್ವರ, ತಲೆನೋವು, ಮೈ–ಕೈ ನೋವು, ಕಣ್ಣು ಕೆಂಪಾಗುವುದು, ವಾಂತಿ ಭೇದಿ ಇವೆಲ್ಲವೂ ಕಾಯಿಲೆಯ ಲಕ್ಷಣ. ಈ ಲಕ್ಷಣ ಕಂಡು ಬಂದರೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಕರ್ಕೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮಾತನಾಡಿ, ‘ಮಂಗನ ಕಾಯಿಲೆ ನಿಯಂತ್ರಿಸಲು ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಈ ಬಾರಿ ಮಂಗನ ಕಾಯಿಲೆಯು ಮೇಲ್ಪಾಲ್ ಭಾಗದಲ್ಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಇದರ ಕುರಿತು ಅರಿವನ್ನು ಮೂಡಿಸಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲು ಎಲ್ಲ ಇಲಾಖೆಗಳೂ ಗಮನಹರಿಸಬೇಕು’ ಎಂದರು.

ಆರೋಗ್ಯ ಇಲಾಖೆಯ ಪವನ್ ಕರ್, 100 ದಿನ ಕ್ಷಯರೋಗ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾಲತಾ, ಸದಸ್ಯರಾದ ಪ್ರಕಾಶ್, ಯಶೋದಾ, ಮಹೇಶ್, ಸುಚಿತ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮ್ ಕುಮಾರ್, ಆರೋಗ್ಯ ಇಲಾಖೆಯ ಡಾ. ಆಕರ್ಷ ಕಿರಣ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಭಗವಾನ್ ಇದ್ದರು. ಡಿಪಾ ತೈಲ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.