ಆಲ್ದೂರು: ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಹಾಗೂ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ನೆನಪುಗಳನ್ನು ಹಂಚಿಕೊಂಡರು. ‘ರೈತರ ಜಮೀನು ಸಮಸ್ಯೆಗಳನ್ನು ಬಗೆಹರಿಸಿ, ಯಾವುದೇ ಕೆಲಸ ಬಾಕಿ ಉಳಿಯದಂತೆ ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಪ್ರಶಸ್ತಿ ಪ್ರಧಾನ ಮಾಡಿತ್ತು’ ಎಂದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿಯ ಆಶೀರ್ವಾದದೊಂದಿಗೆ 10 ವರ್ಷ ವ್ಯಾಸಂಗ ಮಾಡಿದ್ದೆ. ಚಂದ್ರಶೇಖರ ಕುಮಾರನಾಥ ಸ್ವಾಮೀಜಿ ಕಾಯಿಲೆಗೆ ತುತ್ತಾದ ಬಳಿಕ, ಮಠದ ಸೇವಾ ಜವಾಬ್ದಾರಿ ನನಗೆ ವಹಿಸಲಾಯಿತು. ಕಳೆದ 9 ತಿಂಗಳಿಂದ ಮಠದ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಮಠದಲ್ಲಿ ತ್ರಿಕಾಲ ದಾಸೋಹವನ್ನು ಆರಂಭಿಸಿದ್ದು, ಗ್ರಾಮೀಣ ಭಾಗದ ಬಡ–ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ವಸತಿ ಸಹಿತ ತರಬೇತಿ ಕೇಂದ್ರವನ್ನು 3 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಯಾವುದೇ ಜಾತಿ ತಾರತಮ್ಯವಿಲ್ಲದೆ ಶಿಕ್ಷಣ ಸೇವೆ ನೀಡುವುದು ನಮ್ಮ ಗುರಿ. ಸಮಾಜದ ಸಹಕಾರ ಅತ್ಯವಶ್ಯಕ ಎಂದು ಸ್ವಾಮೀಜಿ ಮನವಿ ಮಾಡಿದರು.
ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ., ಪದಾಧಿಕಾರಿಗಳಾದ ವಸಂತ್, ಲಕ್ಷ್ಮಣ್ ಗೌಡ, ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಸುರೇಶ್ ಗೌಡ, ಸಮುದಾಯದ ಮುಖಂಡರಾದ ಕವೀಶ್ ಎಚ್.ಎಸ್., ರುದ್ರೇಗೌಡ, ಶಂಕರ್ ಸೂರಪ್ಪನಹಳ್ಳಿ, ಈರೇಗೌಡ, ಕೌಶಿಕ್ ಎ.ಡಿ., ರವಿಕುಮಾರ್ ಎಚ್.ಎಲ್., ರಂಜಿತ್ ದೊಡ್ಡ ಮಾಗರವಳ್ಳಿ, ಹಳಿಯೂರು ಮಹೇಶ್ ಗೌಡ, ಅಣ್ಣೇಗೌಡ, ಗೋಪಾಲ್ ಗೌಡ, ಚಂಪಾ ಜಗದೀಶ್, ಪ್ರತಿಭಾ ನವೀನ್, ಭವ್ಯ ನಟೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.