ನರಸಿಂಹರಾಜಪುರ: ‘ಸರ್ಕಾರಿ ನೌಕರರು ಜನಸಾಮಾನ್ಯರ ಕೆಲಸ ಮಾಡಿಕೊಡಲು ಅನವಶ್ಯಕ ವಿಳಂಬ ಮಾಡಿದರೆ ಧೈರ್ಯದಿಂದ ಲೋಕಾಯುಕ್ತಕ್ಕೆ ದೂರು ನೀಡಬೇಕು’ ಎಂದು ರಾಮನಗರ ಜಿಲ್ಲೆ ಲೋಕಾಯುಕ್ತ ಡಿಎಸ್‌ಪಿ ಎಸ್.ಸುಧೀರ್ ಹೇಳಿದರು.
ಇಲ್ಲಿನ ಕೃಷಿ ಭವನದಲ್ಲಿ ಭಾನುವಾರ ಸಂಜೆ ನಡೆದ ಜ್ವಾಲಾಮಾಲಿನಿ ಜೇಸಿ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರ, ಲಂಚ ಪ್ರಕರಣಗಳನ್ನು ತನಿಖೆ ಮಾಡುವ ಸ್ವತಂತ್ರ ಸಂಸ್ಥೆಯಾಗಿದೆ. ಯಾವುದೇ ಇಲಾಖೆಯಲ್ಲಿ ಸಾರ್ವಜನಿಕ ಕೆಲಸ ಮಾಡದೆ, ಕಡತವನ್ನು ವಿಲೇವಾರಿ ಮಾಡದೆ ವಿಳಂಬ ಮಾಡುವುದು, ಹಣಕ್ಕೆ ಬೇಡಿಕೆ ಇಡುವುದು ಅಪರಾಧವಾಗುತ್ತದೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಜೆ.ಅಂತೋಣಿ ಸಮಾರೋಪ ಭಾಷಣ ಮಾಡಿದರು. ‘ಸಂಘ ಸಂಸ್ಥೆಗಳು ಯುವಜನರನ್ನು ಕ್ರಿಯಾಶೀಲವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸೃಜನಶೀಲ ಕಾರ್ಯಗಳನ್ನು ಮಾಡಿದಾಗ ಮಾತ್ರ ವ್ಯಕ್ತಿತ್ವ ವಿಕಸನವಾಗುತ್ತದೆ. ಎಲ್ಲ ಧರ್ಮವನ್ನು ಗೌರವಿಸುವ, ಸಕಲ ಜೀವ ರಾಶಿಗಳನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಕುವೆಂಪು ಅವರು ಹೇಳಿದಂತೆ ವಿಶ್ವಮಾನವರಾಗಲು ಸಾಧ್ಯ’ ಎಂದರು.
ಜೇಸಿ ವಲಯ 14ರ ಉಪಾಧ್ಯಕ್ಷ ಕೆ.ಎ.ಸೃಜನ್ ಮಾತನಾಡಿ, ‘ಜೇಸಿ ಸಂಸ್ಥೆ ಆರಂಭವಾಗಿ 75 ವರ್ಷ ಕಳೆದಿದ್ದು ವಿಶ್ವಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಪ್ರಪಂಚದ 106 ದೇಶಗಳಲ್ಲಿ 1.56 ಲಕ್ಷ ಸದಸ್ಯರನ್ನು ಜೇಸಿ ಸಂಸ್ಥೆ ಹೊಂದಿದೆ. ಜ್ಞಾನದಿಂದ ಅಧಿಕಾರ ಸಿಗಬಹುದು. ಆದರೆ, ಸಮಾಜದಲ್ಲಿ ಗೌರವ ಸಿಗಬೇಕಾದರೆ ಉತ್ತಮ ವ್ಯಕ್ತಿತ್ವ ಅವಶ್ಯಕವಾಗಿದೆ’ ಎಂದರು.
ಸಬ್‌ಇನ್‌ಸ್ಪೆಕ್ಟರ್ ನಿರಂಜನ್ ಗೌಡ ಮಾತನಾಡಿದರು. ಜೇಸಿ ಸಂಸ್ಥೆಯ ಅಧ್ಯಕ್ಷ ಎಂ.ಪಿ.ಮನು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ಕೆ.ಗಂಗಾಧರ್, ಚರಣ್ ರಾಜ್, ಸಪ್ತಾಹದ ಪ್ರಧಾನ ಕಾರ್ಯದರ್ಶಿ ಮಿಥುನ್ ಗೌಡ, ಕಾರ್ಯದರ್ಶಿ ಕೆ.ಎಂ.ವಿನುತ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್, ಜೇಸಿರೆಟ್ ಅಧ್ಯಕ್ಷೆ ಎ.ಎಸ್.ರಿಜಾ, ಜೂನಿಯರ್ ಜೇಸಿವಿಂಗ್ ಅಧ್ಯಕ್ಷ ಎಡೆನ್, ಪ್ರೀತಂ, ಸೂರ್ಯಪ್ರಕಾಶ್, ರಜಿಂತ್ ಮತ್ತಿತರರು ಇದ್ದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮೂಲದ ಕೆಲವು ವಂಚಕರ ತಂಡಗಳು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಲೋಟಿ ಮಾಡಲು ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ. ಆಗ ಕನ್ನಡದಲ್ಲಿಯೇ ಮಾತನಾಡಬೇಕು. ಯಾವುದೇ ಕಾರಣಕ್ಕೂ ಒಟಿಪಿ ನೀಡಬಾರದು. ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡದೆ ಕನ್ನಡದಲ್ಲಿಯೇ ಮಾತನಾಡಿದರೆ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಲೋಕಾಯುಕ್ತ ಡಿಎಸ್‌ಪಿ ಎಸ್.ಸುಧೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.