
ತರೀಕೆರೆ: ಪಟ್ಟಣದ ಅರುಣೋದಯ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಹರಿಹರದ ರಾಮಕೃಷ್ಣ- ವಿವೇಕಾನಂದ ಆಶ್ರಮದ ಮುಖ್ಯಸ್ಥ ಆತ್ಮದೀಪಾನಂದ ಮಹಾರಾಜ್ ಸ್ವಾಮೀಜಿ ಆಶೀರ್ವಚನ ಮಾಡಿ, ‘ಜ್ಞಾನ ಮತ್ತು ಏಕಾಗ್ರತೆಯ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಅದನ್ನು ನಾವು ಜಾಗೃತಗೊಳಿಸಬೇಕು. ಏಕಾಗ್ರತೆಯ ಮಟ್ಟ ಯಾರಲ್ಲಿ ಹೆಚ್ಚಿರುತ್ತದೆಯೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಪ್ರಯತ್ನಶೀಲತೆ, ಶಿಸ್ತು, ಸಂಯಮ, ಸಮಯಪ್ರಜ್ಞೆ ಹಾಗೂ ಏಕಾಗ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ. ಮಕ್ಕಳು ಯಾವಾಗಲೂ ಶಾರೀರಿಕ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಸಾಮಾಜಿಕ ಜಾಲತಾಣದಿಂದ ದೂರವಿರಬೇಕು ಎಂದರು.
ಮಕ್ಕಳ ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹಾಗೂ ಜಾತಿ, ಮತ, ಭೇದವಿಲ್ಲದ ದೇಶದ ಶ್ರೇಷ್ಠ ಸತ್ಪ್ರಜೆಗಳನ್ನು ರೂಪಿಸಲು ಶಾಲೆಗಳಲ್ಲಿ ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಎಚ್ ಶ್ರೀಹರ್ಷ ಹೇಳಿದರು.
ಟ್ರಸ್ಟಿ ಗೀತಾಹರ್ಷ, ಮುಖ್ಯಶಿಕ್ಷಕಿ ಗೌರಮ್ಮ, ಸಹಶಿಕ್ಷಕರು ಉಪಸ್ಥಿತರಿದ್ದರು. ಜ್ಯೋತಿ ಸತೀಶ್ ವಂದನಾರ್ಪಣೆ ಮಾಡಿದರು.