ADVERTISEMENT

ಇಚ್ಛಾಶಕ್ತಿ ಇದ್ದರೆ ಜಿಲ್ಲಾಧಿಕಾರಿ ಆದೇಶ ಹಿಂಪಡೆಯುವಂತೆ ಮಾಡಲಿ: ಸತೀಶ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:59 IST
Last Updated 3 ಜುಲೈ 2022, 1:59 IST
ಎಚ್.ಎಂ.ಸತೀಶ್
ಎಚ್.ಎಂ.ಸತೀಶ್   

ಕೊಪ್ಪ: ‘ಶಾಸಕ ರಾಜೇಗೌಡ ಅವರ ಆಡಳಿತ ವೈಫಲ್ಯವಾಗಿದೆ ಎಂದು ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಜೆಪಿಗರಿಗೆ ಇಚ್ಛಾಶಕ್ತಿ ಇದ್ದರೆ, ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡಬಾರದು ಎಂಬ ಜಿಲ್ಲಾಧಿಕಾರಿ ಆದೇಶವನ್ನು ಹಿಂಪಡೆಯುವಂತೆ ಮಾಡಲಿ’ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್ ಸವಾಲೆಸೆದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಇಲ್ಲಿನ ಶಾಸಕರಿಗೆ ಹೆಸರು ಬರುವುದನ್ನು ತಪ್ಪಿಸಲು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಈ ರೀತಿ ಜಿಲ್ಲಾಧಿಕಾರಿ ಮೂಲಕ ಆದೇಶ ಮಾಡಿಸಿದ್ದಾರೆ. ರಾಜಕಾರಣಕ್ಕಾಗಿ ಜೀವರಾಜ್ ರೈತರಿಗೆ ಮರಣಶಾಸನ ಬರೆದರು. ಚುನಾವಣೆ ಎದುರುಗೊಂಡಿರುವುದರಿಂದ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಜೀವರಾಜ್ ಶಾಸಕರಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಸೊಪ್ಪಿನಬೆಟ್ಟ ಜಾಗಕ್ಕೂ ಹಕ್ಕುಪತ್ರ ನೀಡಬಹುದು, ಪಹಣಿ ಹಾಕಬಹುದು ಎಂದು ಅವಕಾಶ ನೀಡಿದ್ದರು. ಪಹಣಿ ಹಾಕಿಕೊಡಲು ಆದೇಶವಿದ್ದರೂ ಜೀವರಾಜ್ ಅವರು ಯಾಕೆ ಹಕ್ಕುಪತ್ರಕ್ಕೆ ಪಹಣಿ ಹಾಕಿಕೊಟ್ಟಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಭ್ರಷ್ಟಾಚಾರಕ್ಕೆ ಒತ್ತಕ್ಷರವೇ ಜೀವರಾಜ್. ಅಕ್ರಮ ಸಕ್ರಮದ ಕಡತ ತಿದ್ದಿ, ಆ ಕಾರಣಕ್ಕಾಗಿ ಕೇಸು ಹಾಕಿಸಿಕೊಂಡಿರುವುದು ಜೀವರಾಜ್’ ಎಂದು ಆರೋಪಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ? ಜಿಲ್ಲಾಧಿಕಾರಿ ರೈತ ವಿರೋಧಿಯಾಗಿ ಆದೇಶ ಮಾಡಿರುವುದು ಅವರ ಗಮನಕ್ಕೆ ಬಂದಿಲ್ಲವೇ. ಒಂದು ವೇಳೆ ಬಂದಿಲ್ಲ ಎಂದರೆ ಅಂತಹ ಅಧಿಕಾರಿಯನ್ನು ಏಕೆ ಉಳಿಸಿಕೊಂಡಿದ್ದಾರೆ. ಸಿ.ಟಿ.ರವಿ, ಜೀವರಾಜ್ ಅವರೇ ಇದಕ್ಕೆಲ್ಲ ಕಾರಣ. ಜೀವರಾಜ್ ಅವರೇ ಹೇಳಿಕೊಳ್ಳುವಂತೆ ಅವರಿಗೆ ಕ್ಯಾಬಿನೆಟ್ ಪವರ್ ಇದೆ ಎಂದ ಮೇಲೆ ಪ್ರತಿಭಟನೆ ಯಾರ ವಿರುದ್ಧ? ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಅಷ್ಟೇ’ ಎಂದು ಆರೋಪಿಸಿದರು.

‘ಅಕ್ರಮ ಸಕ್ರಮ ಸಮಿತಿಗೆ ಸಂಬಂಧಿಸಿದಂತೆ ಕ್ಷೇತ್ರದ ನಾಲ್ಕು ಹೋಬಳಿಗೆ ಅವರದೇ ಪಕ್ಷದ ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್ ಅಧ್ಯಕ್ಷರು. ಪ್ರಾಣೇಶ್ ಅವರು ಕೊಪ್ಪ ತಾಲ್ಲೂಕನ್ನು ನೋಡಲ್ ಆಗಿಯೂ ಮಾಡಿಕೊಂಡಿದ್ದಾರೆ ಎಂದರೆ, ಜೀವರಾಜ್ ಅವರ ಪ್ರತಿಭಟನೆ ಯಾರ ವಿರುದ್ಧ? ಪ್ರಾಣೇಶ್ ಅವರ ಮೇಲೆ ಸೇಡಿದ್ದರೆ ಪಕ್ಷದ ವೇದಿಕೆಯಲ್ಲಿ ತೋರಿಸಲಿ’ ಎಂದು ಟೀಕಿಸಿದರು.

ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ನವೀನ್ ಮಾವಿನಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.