ADVERTISEMENT

ಜೀವರಾಜ್‌ ಸಂಧಾನ– ಧರಣಿ ಅಂತ್ಯ

ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಯ ಬಸ್‌ ಸ್ಥಗಿತ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 10:58 IST
Last Updated 25 ಫೆಬ್ರುವರಿ 2020, 10:58 IST
ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಕಾರ್ಮಿಕರು ಧರಣಿ ತಾತ್ಕಾಲಿಕ ಹಿಂಪಡೆಯುತ್ತಿರುವುದರ ಬಗ್ಗೆ ಶಿರಸ್ತೇದಾರ್ ಶೇಷಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವರಿಕೆ ಪತ್ರವನ್ನು ನೀಡಿದರು. ಮಾಜಿ ಶಾಸಕ ಡಿ.ಎನ್.ಜೀವರಾಜ್ ಇದ್ದರು.
ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ಕಾರ್ಮಿಕರು ಧರಣಿ ತಾತ್ಕಾಲಿಕ ಹಿಂಪಡೆಯುತ್ತಿರುವುದರ ಬಗ್ಗೆ ಶಿರಸ್ತೇದಾರ್ ಶೇಷಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವರಿಕೆ ಪತ್ರವನ್ನು ನೀಡಿದರು. ಮಾಜಿ ಶಾಸಕ ಡಿ.ಎನ್.ಜೀವರಾಜ್ ಇದ್ದರು.   

ಕೊಪ್ಪ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಸಹಕಾರ ಸಾರಿಗೆ ಸಂಸ್ಥೆಯ ಕಾರ್ಮಿಕರು ತಾಲ್ಲೂಕು ಕಚೇರಿ ಎದುರು ನಡೆಸುತ್ತಿದ್ದ ಧರಣಿಯನ್ನು ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಆದರೆ, ಸಂಸ್ಥೆಯ ಬಸ್ ಸೇವೆಯ ಸ್ಥಗಿತ ಮುಂದುವರಿಯಲಿದೆ.

ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಎನ್.ಜೀವರಾಜ್, ‘ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿರುವ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಧರಣಿ ವಾಪಸ್‌ ಪಡೆಯಿರಿ’ ಎಂದು ಮನವಿ ಮಾಡಿದರು.

‘ಜೀವರಾಜ್ ಅವರು ಸರ್ಕಾರದಿಂದ ಅನುದಾನ ಕೊಡಿಸಲು ನಮ್ಮೊಂದಿಗೆ ಚರ್ಚಿಸಿ, ಸಹಕಾರ ಸಾರಿಗೆ ಪುನಶ್ಚೇತನಕ್ಕೆ ಪ್ರಯತ್ನಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಒಂದು ವೇಳೆ ಸಕಾಲದಲ್ಲಿ ಅನುದಾನ ದೊರೆಯದಿದ್ದಲ್ಲಿ ಮತ್ತೊಮ್ಮೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ. ಸಮಸ್ಯೆ ಬಗೆಹರಿಸುವವರೆಗೆ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ’ ಎಂದು ಸಹಕಾರ ಸಾರಿಗೆ ಸಂಸ್ಥೆ ಅಧ‍್ಯಕ್ಷ ಈ.ಎಸ್.ಧರ್ಮಪ್ಪ ತಿಳಿಸಿದರು.

ADVERTISEMENT

ಧರಣಿ ಹಿಂಪಡೆಯುತ್ತಿರುವುದರ ಕುರಿತು ಶಿರಸ್ತೇದಾರ್ ಶೇಷಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವರಿಕೆ ಪತ್ರವನ್ನು ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಮಸ್ವಾಮಿ, ಮುಖಂಡರಾದ ಅದ್ದಡ ಸತೀಶ್, ಎಚ್.ಕೆ.ಸುರೇಶ್, ಎಚ್.ಕೆ.ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.