ADVERTISEMENT

ಪ್ರತಿಮೆ ವಿವಾದ: ಜಾತಿ ಸಂಘರ್ಷವಾಗಿ ಪರಿವರ್ತನೆ ಅಪಾಯಕಾರಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 12:38 IST
Last Updated 29 ಆಗಸ್ಟ್ 2020, 12:38 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಿಸುವುದು ಹೆಮ್ಮೆ ವಿಷಯ. ರಾಯಣ್ಣನ ಬಗ್ಗೆ ನಮ್ಮೊಳಗೆ ಶ್ರದ್ಧೆ ಇದೆ, ಹೊರಗಡೆಯಿಂದ ಕಲಿಯಬೇಕಿಲ್ಲ. ಅಶ್ರದ್ಧೆ ಪ್ರಶ್ನೆಯೇ ಇಲ್ಲ, ವಿಚಾರವನ್ನು ಜಾತಿ ಸಂಘರ್ಷವಾಗಿ ಪರಿವರ್ತಿಸುತ್ತಿರುವುದು ಅಪಾಯಕಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಯಣ್ಣನ ಬಗ್ಗೆ ನಮ್ಮದು ಸ್ವಾಭಾವಿಕ ಶ್ರದ್ಧೆಯೇ ಹೊರತು ರಾಜಕೀಯ ಕಾರಣಕ್ಕೆ ಇರುವ ಶ್ರದ್ಧೆಯಲ್ಲ. ಕೆಲವರಿಗೆ ರಾಜಕೀಯ ಕಾರಣಕ್ಕೆ ಶ್ರದ್ಧೆ ಇರಬಹುದು’ ಎಂದು ವ್ಯಂಗ್ಯವಾಡಿದರು.

‘ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡಲಾಗುವುದು, ಅಡೆತಡೆಗಳನ್ನು ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದಾಗ್ಯೂ ಕೆಲವರು ಗಲಾಟೆ ಮಾಡಿರುವುದು ದುರುದ್ದೇಶಪೂರ್ವಕ. ಇದರಲ್ಲಿ ಷಡ್ಯಂತ್ರ ಇದ್ದಂತಿದೆ ಎಂದು ಹೇಳಿದ್ದೆ. ಇದನ್ನು ನೆಪವಾಗಿಟ್ಟುಕೊಂಡು ಈಗ ಚಳವಳಿ ಮಾಡಿರುವುದೂ ದುರುದ್ದೇಶಪೂರ್ವಕ’ ಎಂದು ಛೇಡಿಸಿದರು.

ADVERTISEMENT

‘ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಹೇಳಿಕೆಯಲ್ಲಿ ತಪ್ಪಿಲ್ಲದಿದ್ದರೂ ತಪ್ಪು ಹುಡುಕುವ ಪ್ರಯತ್ನ ಮಾಡಿದ್ದಾರೆ. ತಪ್ಪು ಅಭಿಪ್ರಾಯ ಮೂಡಿಸುವುದು ಸಂಚಿನ ಭಾಗ’ ಎಂದು ತಿವಿದರು.

‘ಡ್ರಗ್ಸ್‌ ದಂಧೆ ಜಾಲದ ಬಗ್ಗೆ ತಮಗಿರುವ ಮಾಹಿತಿ ನೀಡಲು ಇಂದ್ರಜಿತ್‌ ಲಂಕೇಶ್‌ ಭಯ ಪಡಬೇಕಿಲ್ಲ. ಅವರಿಗೆ ಪೊಲೀಸರು ರಕ್ಷಣೆ ಕೊಡುತ್ತಾರೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.