ADVERTISEMENT

ನೋವನ್ನು ಮರೆಸಿದ ಕರ್ತವ್ಯಪ್ರಜ್ಞೆ

ಪುರಸಭೆಯ ಹೊರಗುತ್ತಿಗೆ ನೌಕರ ಶಿವಶಂಕರ್

ದಾದಾಪೀರ್
Published 30 ಜೂನ್ 2020, 9:17 IST
Last Updated 30 ಜೂನ್ 2020, 9:17 IST
ಶಿವಶಂಕರ್
ಶಿವಶಂಕರ್   

ತರೀಕೆರೆ: ಕೋವಿಡ್‌ ಸೋಂಕು ದೃಢಪಟ್ಟ ಪ್ರದೇಶಗಳಿಗೆ ಹೋಗಲು ಜನರು ಭಯ ಪಡುತ್ತಿರುವ ಸಂದರ್ಭ ದಲ್ಲಿಯೂ ಪೌರ ಕಾರ್ಮಿಕರು ಮಾತ್ರ ತಮ್ಮ ಸೇವೆಯಲ್ಲಿ ತಲ್ಲೀನರಾಗಿದ್ದಾರೆ. ಸೋಂಕು ಹರಡುವುದನ್ನು ತಡೆಯುವ ಕಾರ್ಯದಲ್ಲಿ ನಿರತರಾಗಿರುವ ತರೀಕೆರೆಯ ಪೌರ ಕಾರ್ಮಿಕರ ಸೇವಾ ಮನೋಭಾವವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಜೀಪ್‌ಗಳಲ್ಲಿ ಕುಳಿತು ಧ್ವನಿವರ್ಧಕದ ಮೂಲಕ ಜನರಿಗೆ ಜಾಗೃತಿ ಹೇಳುತ್ತಿದ್ದ ಅಧಿಕಾರಿಗಳ ಮಧ್ಯೆ ಎಲೆಮರೆಯ ಕಾಯಿಯಂತೆ ಕೈಯಲ್ಲಿ ಕೀಟನಾಶಕ ಸಿಂಪಡಣೆಯ ಯಂತ್ರ ಹಿಡಿದು, ಪಟ್ಟಣವನ್ನು ಸ್ಯಾನಿಟೈಸ್‌ ಮಾಡಿದ ಪುರಸಭೆಯ ಹೊರಗುತ್ತಿಗೆ ನೌಕರ ಶಿವಶಂಕರ್ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯವಾದುದು.

ಶಿವಶಂಕರ್ ಅವರು ಐದು ವರ್ಷಗಳ ಹಿಂದೆ ಚಾಲಕರಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಈಗ ಸ್ಯಾನಿಟೈಸ್‌ ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ, ಸಾರ್ವಜನಿಕ ಪ್ರದೇಶಗಳು, ಪಟ್ಟಣದ ಗಲ್ಲಿಗಳು, ಪೊಲೀಸ್ ಠಾಣೆ, ನ್ಯಾಯಾಲಯ, ಪರೀಕ್ಷಾ ಕೇಂದ್ರಗಳು ಸೇರಿದಂತೆ ಅಜ್ಜಂಪುರ ತಾಲ್ಲೂಕಿನ ಸರ್ಕಾರಿ ಕಚೇರಿಗಳು, ವಸತಿ ಶಾಲೆಗಳು ಹಾಗೂ ಜನವಸತಿ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡಿದ್ದಾರೆ. ಕೊರೊನಾ ವಾರಿಯರ್ಸ್‌ಗಳನ್ನು ನಾಗರಿಕರು ಅಭಿನಂದಿಸಿ ಸನ್ಮಾನಿಸುತ್ತಿದ್ದರೆ ಅವರು ಮಾತ್ರ ಸಹಾಯಕರೊಂದಿಗೆ ಬೀದಿಗಳ ಸುತ್ತಿ ಕೀಟನಾಶಕ ಸಿಂಪರಣೆಯಲ್ಲಿ ಮಗ್ನರಾಗಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಕೋವಿಡ್‌ ಸೋಂಕು ದೃಢಪಟ್ಟಾಗ ಪಟ್ಟಣದ ಹೊರ ವಲಯದ ನಿರ್ಬಂಧಿತ ಪ್ರದೇಶದಲ್ಲಿ ಸಹಾಯಕರೊಡನೆ ಸ್ಪ್ರೇ ಮೆಷಿನ್ ಹಿಡಿದು, ಸ್ಯಾನಿಟೈಸ್‌ ಮಾಡಲು ರಸ್ತೆಗೆ ಇಳಿದವರು ಇದೇ ಶಿವಶಂಕರ್.

‘ಸೀಲ್‌ಡೌನ್ ಪ್ರದೇಶಗಳಲ್ಲಿ ಹೋಗಲು ಭಯವೇನು ಆಗಲಿಲ್ಲ ಎನ್ನುವ ಶಿವಶಂಕರ್ ತಮ್ಮ ವೃತ್ತಿಯೇ ಭಯ ಮತ್ತು ಭೀತಿಯಲ್ಲಿ ಆರಂಭವಾಗುತ್ತದೆ. ಸಾವಿರಾರು ಜನರ ಪ್ರಾಣ ರಕ್ಷಣೆಯಾಗುತ್ತದೆ ಎಂದರೆ ನನ್ನೊಬ್ಬನದು ಯಾವ ಮಹಾ ಹೇಳಿ. ನಮ್ಮದು ತಂಡದ ಕೆಲಸ. ಮಧುಸೂಧನ, ವಸಂತ್, ಶಿವಕುಮಾರ್, ಚೇತನ್ ಅವರು ನನ್ನ ಜತೆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ಶಿವಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.