ADVERTISEMENT

ಭ್ರಷ್ಟಾಚಾರ: ಶಾಸಕ ಟಿ.ಡಿ.ರಾಜೇಗೌಡ, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:28 IST
Last Updated 26 ಸೆಪ್ಟೆಂಬರ್ 2025, 2:28 IST
ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ   

ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಇಲ್ಲಿನ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಆದೇಶದಂತೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಟಿ.ಡಿ. ರಾಜೇಗೌಡ ಅವರು ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸರ್ಕಾರಕ್ಕೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದಾರೆ. ಅವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು’ ಎಂದು ದಿನೇಶ್ ಎಚ್.ಕೆ. ದೂರಿನಲ್ಲಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆ.16ರಂದು ಆದೇಶ ನೀಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿತ್ತು.

ADVERTISEMENT

‘ರಾಜೇಗೌಡ ಅವರ ಕುಟುಂಬ ಸದಸ್ಯರು ತಮ್ಮ ಆದಾಯ ಮೂಲಗಳಿಗೆ ತಾಳೆಯಾಗದಷ್ಟು ಆಸ್ತಿ ಸಂಪಾದಿಸಿದ್ದಾರೆ. ಅವರ ಪಾಲುದಾರಿಕೆ ಸಂಸ್ಥೆಯಾದ ಮೆ.ಶಬಾನಾ ರಂಜಾನ್‌ನ ವ್ಯವಹಾರಗಳು ಸಾಕ್ಷಿ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

1984ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ಪ್ರಾಥಮಿಕವಾಗಿ ಹಾಜಿ ಔರಂಗಜೇಬ್ ಮತ್ತು ಇತರರು ಪಾಲುದಾರರಾಗಿದ್ದರು. ನಂತರ 1992ರಲ್ಲಿ ಎಸ್.ವಿ. ಗಂಗಯ್ಯ ಹೆಗ್ಡೆ, ವಿ.ಜಿ. ಸಿದ್ಧಾರ್ಥ ಹಾಗೂ ಮಾಳವಿಕಾ ಹೆಗ್ಡೆ ಸಂಸ್ಥೆಗೆ ಪಾಲುದಾರರಾದರು. ಈ ಸಂಸ್ಥೆಯ ಮೂಲಕ ಅವರು 266 ಎಕರೆ ಕಾಫಿ ತೋಟ ಖರೀದಿಸಿದ್ದರು. 1993ರಲ್ಲಿ ಮೂಲ ಪಾಲುದಾರರು ಸಂಸ್ಥೆಯಿಂದ ಹಿಂದೆ ಸರಿದರು. ನಂತರ, ಕಂಪನಿಯು ತೋಟ ಅಡಮಾನವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿತ್ತು. 

2019ರಲ್ಲಿ ಸಿದ್ಧಾರ್ಥ ಹಾಗೂ ಗಂಗಯ್ಯ ಹೆಗ್ಡೆ ಅವರ ಮರಣದ ನಂತರ, ಶಾಸಕ ರಾಜೇಗೌಡರ ಪತ್ನಿ ಡಿ.ಕೆ. ಪುಷ್ಪಾ ಅವರನ್ನು ಶೇ 48ರಷ್ಟು ಪಾಲುದಾರರನ್ನಾಗಿ ಸೇರಿಸಲಾಯಿತು. ಕೆಲವು ತಿಂಗಳ ನಂತರ ಶಾಸಕರ ಪುತ್ರ ರಾಜ್‌ದೇವ್ ಟಿ.ಆರ್. ಸಹ ಪಾಲುದಾರರಾದರು. ‌

‘ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ ₹55.75 ಕೋಟಿ, ಬ್ಯಾಂಕ್ ಆಫ್ ಬರೋಡಾಗೆ ₹66 ಕೋಟಿ ಹಾಗೂ ಕರ್ನಾಟಕ ಬ್ಯಾಂಕ್‌ಗೆ ₹81.95 ಲಕ್ಷ ಪಾವತಿಸಲಾಗಿದೆ. ಆದರೆ, ಲೋಕಾಯುಕ್ತಕ್ಕೆ ರಾಜೇಗೌಡರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಾರ್ಷಿಕ ಆದಾಯ ಕೇವಲ ₹40 ಲಕ್ಷ ಎಂದು ಘೋಷಿಸಿದ್ದಾರೆ’ ಎಂಬುದು ದೂರುದಾರರ ವಾದ.

ಈ ದಾಖಲೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದ್ದ ದಿನೇಶ್ ಅವರು, ತನಿಖೆ ನಡೆಸುವಂತೆ ಈ ಹಿಂದೆಯೇ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಆರೋಪಗಳು ನಿರಾಧಾರ ಎಂದು 2023ರಲ್ಲಿ ವರದಿ ನೀಡಿದ್ದರು. ದೂರುದಾರರು ಇದನ್ನು ಪ್ರಶ್ನಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಲೋಕಾಯುಕ್ತ ಪೊಲೀಸರು ಮತ್ತೊಮ್ಮೆ ಎಫ್‌ಐಆರ್‌ ದಾಖಲಿಸಿದ್ದು, ಸಮಗ್ರವಾಗಿ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.