ಕಡೂರು: ‘ಸಾರ್ವಜನಿಕರಿಗೆ ಅನುಕೂಲದ ನೆಪದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು ಮತ್ತು ಅಭಿವೃದ್ಧಿಗೆ ಆದ್ಯತೆ ನೀಡದೆ ಭ್ರಷ್ಟಾಚಾರಕ್ಕೆ ಮಣೆ ಹಾಕಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಮುಂಭಾಗ ರಾಜ್ಯ ಸರ್ಕಾರದ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಾವು ಬಡವರ ಪರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳುತ್ತಾ, ಇ-ಖಾತೆ ಪಡೆಯಲು ದುಬಾರಿ ಹಣ ಪಾವತಿ, ಹೊಸ ವಿದ್ಯುತ್ ಸಂಪರ್ಕ, ಪಹಣಿ, ರೈತರಿಗೆ ಬೇಕಾದ ಟ್ರಾನ್ಸ್‌ಫಾರ್ಮರ್ ಪಡೆಯಲು ಹರಸಾಹಸ ಪಡುವಂತೆ ಮಾಡಿರುವುದು ಜನಪರ ನೀತಿಯೇ? 23 ಲಕ್ಷ ಜನರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಿದ್ದು ಬಡವರಿಗೆ ನೀಡಿದ ನ್ಯಾಯದ ಗ್ಯಾರಂಟಿಯೇ ಎಂದು ಪ್ರಶ್ನಿಸಿದರು.
ದಿನನಿತ್ಯ ಬಳಸುವ ಅಡುಗೆ ಎಣ್ಣೆ ದರ ಹೆಚ್ಚುತ್ತಿದೆ. ₹ 20 ಇದ್ದ ಬಾಂಡ್ ಪೇಪರ್ ₹ 100 ಆಗಿದೆ. ತಮ್ಮ ಚಿನ್ನವನ್ನು ಅಡವಿಟ್ಟವರೇ ಸರ್ಕಾರಕ್ಕೆ ಸುಂಕ ಪಾವತಿಸಬೇಕಿದೆ. ಬಿತ್ತನೆ ಬೀಜಗಳ ದರವನ್ನು ಶೇ 40 ರಿಂದ ಶೇ 60ರಷ್ಟು ಹೆಚ್ಚಿಸಲಾಗಿದೆ. ಮದ್ಯದ ದರವನ್ನು ವರ್ಷಕ್ಕೆ ಮೂರು ಬಾರಿ ಏರಿಕೆ ಮಾಡಿ ಅದರ ಹಣದಲ್ಲಿ ಮಂತ್ರಿಗಳಿಗೆ, ಶಾಸಕರಿಗೆ ಕಾರು ಖರೀದಿಸಲಾಗುತ್ತಿದೆ. ಸಾಗುವಳಿ ಚೀಟಿಗಾಗಿ ಅಲೆದು ರೈತರು ಸೊರಗುತ್ತಿದ್ದಾರೆ. ಗಂಡನಿoದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಅರ್ಧವನ್ನು ಇಟ್ಟುಕೊಂಡು ಉಳಿದರ್ಧವನ್ನು ಹೆಂಡತಿಗೆ ಕೊಡುವುದು ಯಾವ ನ್ಯಾಯ? ಏನೇ ಆದರೂ ಇದೊಂದು ಜನವಿರೋಧಿ ಸರ್ಕಾರವಾಗಿದೆ. ಇನ್ನು ಒಂದು ತಿಂಗಳಲ್ಲಿ ಇದನ್ನು ಸರಿ ಪಡಿಸದಿದ್ದರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾಪoಚಾಯಿತಿ, ಕೊನೆಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ನಿಡಘಟ್ಟ ಲೋಕೇಶ್ ಮಾತನಾಡಿ, ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಎಲ್ಲಾ ಯೋಜನೆಗಳನ್ನು ರದ್ದು ಮಾಡುತ್ತ, ಜನರಿಗೆ ಮೋಸ ಮಾಡುತ್ತಿದ್ದಾರೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಹೋರಾಟ ಮಾಡಲಾಗುವುದು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮಣನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ನಮ್ಮ ಎಲ್ಲಾ ತಾಂಡಾಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದವು. ಈಗ ಯಾವುದೇ ನಿಗಮಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ. ಪರಿಶಿಷ್ಟರಿಗೆ ಮೀಸಲಿಟ್ಟ ₹ 3,600 ಕೋಟಿಯನ್ನು ಅನ್ಯ ಕೆಲಸಗಳಿಗೆ ಬಳಸಿ ಅನ್ಯಾಯ ಮಾಡುತ್ತಿದೆ. ಎಲ್ಲ ದರವೂ ಜಾಸ್ತಿಯಾಗಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ರಂಜಿತ್, ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು, ಉಪಾಧ್ಯಕ್ಷೆ ಗೀತಾ ಚೇತನ್, ರೇಣುಕಾ, ಸದಸ್ಯರಾದ ಲಿಂಗರಾಜು, ಶೈಲಜಾ, ಗೀತಾ, ಮುಖಂಡರಾದ ಅಭಿ, ಸುರೇಶ್, ಕಾರ್ಯಕರ್ತರು ಭಾಗವಹಿಸಿದ್ದರು. ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.