ADVERTISEMENT

ಪ್ರಯೋಜನಕ್ಕೆ ಬಾರದ ವೆಂಟಿಲೇಟರ್‌!

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯವಿದ್ದರೂ ತಾಂತ್ರಿಕ ಸಿಬ್ಬಂದಿ ಇಲ್ಲ

ಕೆ.ವಿ.ನಾಗರಾಜ್
Published 18 ಮೇ 2021, 3:36 IST
Last Updated 18 ಮೇ 2021, 3:36 IST
ಎನ್‌.ಆರ್‌.ಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್
ಎನ್‌.ಆರ್‌.ಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್   

ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದರೂ ತುರ್ತು ಸಂದರ್ಭದಲ್ಲಿ ಅವುಗಳನ್ನು ರೋಗಿ ಗಳಿಗೆ ಬಳಸಲು ತಾಂತ್ರಿಕ ಸಿಬ್ಬಂದಿಯಿಲ್ಲ. ಹೀಗಾಗಿ, ಸೌಲಭ್ಯವಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ನೂರು ಹಾಸಿಗೆಗಳ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ದಿನಗಳ ಹಿಂದೆ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿ 3 ಎಚ್‌ಡಿಯು ಹಾಸಿಗೆಗಳು, 6 ವೆಂಟಿಲೇಟರ್ ಹಾಸಿಗೆಗಳು ಲಭ್ಯವಿದೆ. ಅಲ್ಲದೆ, ಇಲ್ಲಿ 24 ಜಂಬೊ ಸಿಲಿಂಡರ್, 18 ಬಿ ಟೈಪ್ ಸಿಲಿಂಡರ್ ಹಾಗೂ 2 ಎ ಟೈಪ್ ಸಿಲಿಂಡರ್ ಆಸ್ಪತ್ರೆಯಲ್ಲಿ ಲಭ್ಯವಿದೆ.

ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ಅರವಳಿಕೆ ತಜ್ಞರು , 30ಕ್ಕೂ ಹೆಚ್ಚು ಶುಶ್ರೂಷಕರು ಇದ್ದಾರೆ. ಆದರೆ, ವೆಂಟಿಲೇಟರ್ ಬಳಕೆಯ ಬಗ್ಗೆ ತರಬೇತಿ ಪಡೆದ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವೆಂಟಿಲೇಟರ್ ಆರಂಭಿ ಸಲು ಬೇಕಾಗುವಷ್ಟು ಸಿಲಿಂಡರ್‌ಗಳ ಕೊರತೆಯೂ ಇದೆ. ವೆಂಟಿಲೇಟರ್ ಬಳಸಿ ರೋಗಿಗೆ ಚಿಕಿತ್ಸೆ ನೀಡಲು ಆರಂಭಿಸಿದರೆ ದಿನದ 24 ಗಂಟೆ ನೋಡಿಕೊಳ್ಳಲು ತಜ್ಞ ವೈದ್ಯರು, ಸ್ಟಾಫ್‌ ನರ್ಸ್ ಅಥವಾ ತರಬೇತಿ ಪಡೆದ ಸಿಬ್ಬಂದಿ ಇರಲೇಬೇಕಾಗುತ್ತದೆ.

ADVERTISEMENT

ತಾಲ್ಲೂಕಿನ ವ್ಯಾಪ‍್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗಂಭೀರ ಲಕ್ಷಣಗಳನ್ನು ಹೊಂದಿರುವ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್
ಕೇರ್ ಸೆಂಟರ್ ಆರಂಭವಾದ ಮೇಲೆ ಇಲ್ಲಿ 20 ಸೋಂಕಿತರು ಚಿಕಿತ್ಸೆಗೆ ಪಡೆಯುತ್ತಿದ್ದಾರೆ.

ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ‘ವೆಂಟಿಲೇಟರ್ ಸೇವೆ ಆರಂಭಿಸಲು ಆಮ್ಲಜನಕ ಕೊರತೆ ಹಾಗೂ ಇದಕ್ಕೆ ಬೇಕಾಗುವ ಪರಿಕರಗಳ ಕೊರತೆಯಿದೆ. ತರಬೇತಿ ಹೊಂದಿದ ಶುಶ್ರೂಷಕಿಯರ ಕೊರತೆಯೂ ಇದೆ. ಒಂದು ವೇಳೆ ಆಮ್ಲಜನಕ ಪೂರೈಕೆಯಾದರೆ ವೆಂಟಿಲೇಟರ್ ಸೌಲಭ್ಯ ಒದಗಿಸಬಹುದು’ ಎಂದು ಹೇಳಿದರು.

‘ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 6 ವೆಂಟಿಲೇಟರ್‌ಗಳಿದ್ದರೂ ಜನಸಾಮಾನ್ಯರಿಗೆ ಇದರ ಸೌಲಭ್ಯ ಲಭಿಸುತ್ತಿಲ್ಲ. ಗಂಭೀರ ಲಕ್ಷಣದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೋಗುವ ಸ್ಥಿತಿಯಿದೆ. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಜನರಿಗೆ ಸೌಲಭ್ಯ ಸಿಗುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಗ್ರಾಮಸ್ಥ ಚೆರಿಯನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.