ADVERTISEMENT

ತುಂಬಿಕೊಂಡ ಮಳೆ ನೀರು: ಶವ ಸಂಸ್ಕಾರಕ್ಕೆ ಪರದಾಟ

ಕಡೂರಿನ ಚಿಕ್ಕ ದೇವನೂರಿನ ಎಸ್. ಬೊಮ್ಮೇನಹಳ್ಳಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 1:20 IST
Last Updated 7 ಸೆಪ್ಟೆಂಬರ್ 2022, 1:20 IST
ಹರಿಯುತ್ತಿರುವ ನೀರಿನಲ್ಲೆ ಶವಪೆಟ್ಟಿಗೆ ಹೊತ್ತು ಸಾಗುತ್ತಿರುವ ದೃಶ್ಯ
ಹರಿಯುತ್ತಿರುವ ನೀರಿನಲ್ಲೆ ಶವಪೆಟ್ಟಿಗೆ ಹೊತ್ತು ಸಾಗುತ್ತಿರುವ ದೃಶ್ಯ   

ಕಡೂರು: ಸ್ಮಶಾನಕ್ಕೆ ಹೋಗುವ ದಾರಿಯು ಜಲಾವೃತಗೊಂಡ ಕಾರಣ ಶವ ಸಾಗಿಸಲಾರದೇ ಕುಟುಂಬದವರು ಒಂದು ದಿನ ಪರದಾಡಿದ ಘಟನೆ ತಾಲ್ಲೂಕಿನ ಚಿಕ್ಕ ದೇವನೂರಿನ ಎಸ್. ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರಮೋದ್( 55) ಸೋಮವಾರ ಮೃತಪಟ್ಟಿದ್ದರು. ಅವರಿಗೆ ಪತ್ನಿ ಮತ್ತು ಒಬ್ಬ ಮಗ ಇದ್ದಾನೆ. ಉತ್ತಮ ಮಳೆಯಿಂದ ದೇವನೂರು ಕೆರೆ ತುಂಬಿ ಅಪಾರ‌ ಪ್ರಮಾಣದ ನೀರು ಹೊರಹೋಗುತ್ತಿದ್ದು, ಈ ಗ್ರಾಮದ ಬಳಿಯಿರುವ ಕ್ರೈಸ್ತ ಸ್ಮಶಾನಕ್ಕೆ ಹೋಗುವ ದಾರಿಯೂ ಜಲಾವೃತಗೊಂಡಿತ್ತು.

ಇದರಿಂದಾಗಿ ಶವ ಸಾಗಿಸಲು ಕುಟುಂಬದವರು ಮಂಗಳವಾರ ಬೆಳಿಗ್ಗೆ ವರೆಗೆ ಕಾಯಬೇಕಾಯಿತು. ಮಧ್ಯಾಹ್ನ ಹೊತ್ತಿಗೆ ನೀರು ತುಸು ಇಳಿಮುಖವಾಗಿದ್ದು, ಮಂಡಿಯ ವರೆಗೆ ಹರಿಯುತ್ತಿದ್ದ ನೀರಿನಲ್ಲೇ ಶವ(ಶವ ಪೆಟ್ಟಿಗೆಯಲ್ಲಿ)ವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ.

ADVERTISEMENT

ಜೆಸಿಬಿ ಮೂಲಕ ಎರಡು ಮೂರು ಕಡೆ ಗುಂಡಿ ತೆಗೆದರೂ, ಅಲ್ಲಿ ನೀರು ಬಂದು ತುಂಬಿಕೊಳ್ಳುತ್ತಿತ್ತು. ಸ್ವಲ್ಪ ಎತ್ತರದ ಭಾಗದಲ್ಲಿ ಗುಂಡಿ ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬಹಳಷ್ಟು ವರ್ಷದಿಂದ ಈ ಸಮಸ್ಯೆ ಇದೆ. ಮೃತರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡಲೂ ಅಡ್ಡಿಯಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರಿಕೊಂಡರೂ ಕ್ರಮ ಕೈಗೊಂಡಿಲ್ಲ ಎಂದು ಮೃತ ಪ್ರಮೋದ್ ಅವರ ಸಂಬಂಧಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.