ADVERTISEMENT

ಸೌಲಭ್ಯಗಳ ಕೊರತೆ: ಹಿಂದೂ ಸ್ಮಶಾನ ಅನಾಥ

ಪುರಸಭೆಯಿಂದ ನಿರ್ಲಕ್ಷ್ಯ– ಅಭಿವೃದ್ಧಿಗೆ ನಾಗರಿಕರ ಆಗ್ರಹ

ದಾದಾಪೀರ್
Published 19 ಸೆಪ್ಟೆಂಬರ್ 2019, 10:09 IST
Last Updated 19 ಸೆಪ್ಟೆಂಬರ್ 2019, 10:09 IST
ತರೀಕೆರೆ ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿಗೆ ಹೋಗುವ ರಸ್ತೆಯಲ್ಲಿ ಕೊಚ್ಚೆ ನೀರು ಹರಿದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.
ತರೀಕೆರೆ ಪಟ್ಟಣದಲ್ಲಿರುವ ಹಿಂದೂ ರುದ್ರಭೂಮಿಗೆ ಹೋಗುವ ರಸ್ತೆಯಲ್ಲಿ ಕೊಚ್ಚೆ ನೀರು ಹರಿದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.   

ತರೀಕೆರೆ: ಪಟ್ಟಣದ ಮಧ್ಯಭಾಗದಲ್ಲಿರುವ ಹಿಂದೂ ಸ್ಮಶಾನ ಅಭಿವೃದ್ಧಿ ಕಾಣದೇ ಅನಾಥವಾಗಿದ್ದು, ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆರ್.ಎಂ.ಸಿ. ಪ್ರಾಂಗಣದ ಮುಂಭಾಗದ ರಸ್ತೆಯಲ್ಲಿರುವ ಈ ಸ್ಮಶಾನಕ್ಕೆ ನಾಗರಿಕರು ಓಡಾಡಲು ರಸ್ತೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ. ರೈಲ್ವೆ ಸೇತುವೆ ಕೆಳಗಿನ ರಸ್ತೆಯಲ್ಲಿ ಚರಂಡಿಗಳ ಮೂಲಕ ಹರಿದು ಬರುವ ಕೊಚ್ಚೆ ನೀರು ಇಲ್ಲಿಂದಲೇಹರಿಯುತ್ತಿರುವುದರಿಂದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, ಅನೈರ್ಮಲ್ಯ ಕಾರಣದಿಂದಾಗಿ ಇಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಾಗುವ ದೃಶ್ಯ ಕಂಡು ಬರುತ್ತಿದೆ.

‘ನೀರು ಸರಾಗವಾಗಿ ಹರಿದು ಹೋಗಲು ಪ್ರತ್ಯೇಕ ಕಾಲುವೆ ನಿರ್ಮಾಣ ಮಾಡಬೇಕಿದ್ದ ಪುರಸಭೆ ಇದರ ಬಗ್ಗೆ ಗಮನ ಹರಿಸಿಲ್ಲ. ಎರಡರಿಂದ ಮೂರು ಅಡಿಗಳಷ್ಟು ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದು, ಶವಗಳನ್ನು ಹೊತ್ತು ಸಾಗಿಸುವುದು ಕಷ್ಟಸಾಧ್ಯವಾಗಿದೆ’ ಎಂದು ನಾಗರಿಕರ ಚಂದ್ರಶೇಖರ್ ದೂರಿದ್ದಾರೆ.

ADVERTISEMENT

‘ಈ ಸ್ಮಶಾನ ತಲುಪಲು ಬಿ.ಎಚ್.ರಸ್ತೆಯಿಂದ ಒಂದು ಕಿ.ಮೀ. ದೂರದ ವರೆಗೂ ಜನರು ನಡೆದುಕೊಂಡೇ ಸಾಗಬೇಕಾಗಿದೆ. ದೀಪಗಳ ವ್ಯವಸ್ಥೆಯಿಲ್ಲದ ಕಾರಣ ರಾತ್ರಿವೇಳೆ ಸಾಗುವುದು ಹಾಗೂ ಅಂತಿಮ ಸಂಸ್ಕಾರ ಮಾಡುವುದು ಕಿರಿಕಿರಿ ಉಂಟುಮಾಡುತ್ತಿದೆ. ನೀರಿನ ವ್ಯವಸ್ಥೆ ಇಲ್ಲ, ಚಿತಾಗಾರ ನಿರ್ಮಿಸಿಲ್ಲ. ಸ್ಮಶಾನ ವಿಶಾಲವಾದ ಜಾಗವನ್ನು ಹೊಂದಿದ್ದು, ಜಾಗ ಖಾಸಗಿಯವರಿಂದ ಒತ್ತುವರಿಯಾ
ಗುತ್ತಿದೆ ಎಂದು ದೂರುತ್ತಾರೆ’ ಅವರು.

ಸ್ಥಳೀಯ ಆಡಳಿತವು ಸ್ಮಶಾನದ ಸುತ್ತ ಕಾಂಪೌಂಡ್‌, ಶೆಡ್ ಹಾಗೂ ಗಿಡ ಮರಗಳನ್ನು ನೆಟ್ಟು ಸುಂದರ ಪರಿಸರವನ್ನಾಗಿ ರೂಪಿಸಲಿ ಎಂದು ಕೆ.ಜಿ.ತಿಪ್ಪೇಶ್ ಒತ್ತಾಯಿಸಿದ್ದಾರೆ.

‘ರೈಲ್ವೆ ಇಲಾಖೆ ಅನುಮತಿ ಪಡೆದು ರಸ್ತೆಯನ್ನು ಪೂರ್ಣಗೊಳಿಸಲಾಗುವುದು ಹಾಗೂ ಸ್ಮಶಾನ ಅಭಿವೃದ್ಧಿಗಾಗಿ ಬೇಕಾಗಿರುವ ಕ್ರಮವನ್ನು ಪುರಸಭೆ ನಿರ್ವಹಿಸಲಿದೆ’ ಎಂದು ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.