
ಆಲ್ದೂರು: ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸುವಿನಹಕ್ಲು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ಕ್ರಷರ್‌ನಿಂದ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು, ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಅರೇನೂರು ಸುಪ್ರೀತ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದು, ‘1981ರ ಪರಿಸರ ಸಂರಕ್ಷಣೆ ಕಾಯ್ದೆ–1986, 2011ರ ಕರ್ನಾಟಕ ಕಲ್ಲುಪುಡಿ ನಿಯಂತ್ರಣ ಘಟಕಗಳ ಕಾಯ್ದೆ– 6(ಎ)ನಲ್ಲಿರುವ ಷರತ್ತು ಉಲ್ಲಂಘಿಸಲಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 2025ರ ನವೆಂಬರ್ 20ರಂದು ಕ್ರಷರ್‌ಗೆ ನೋಟಿಸ್ ಜಾರಿಯಾಗಿದೆ. ಆದರೂ ಯಾವುದೇ ಷರತ್ತುಗಳ ಅನುಪಾಲನೆ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
‘2025ರ ಡಿಸೆಂಬರ್ 16ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಷರ್ ಟಿಪ್ಪರನ್ನು ತಪಾಸಣೆ ನಡೆಸಿದ್ದು, ನಿಗದಿತ 7 ಮೆಟ್ರಿಕ್ ಟನ್‌ಗೆ ಬದಲಾಗಿ 10 ಮೆಟ್ರಿಕ್ ಟನ್ ಸಾಗಣೆ ಮಾಡಿರುವುದು ಕಂಡು ಬಂದಿದೆ. ನಿಯಮ ಉಲ್ಲಂಘಿಸಿದ್ದರಿಂದ ಅಧಿಕಾರಿಗಳು ₹25 ಸಾವಿರ ದಂಡ ಹಾಕಿದ್ದಾರೆ. ದಂಡ ಪಾವತಿಸಿ ಬಳಿಕ ಸಾಗಣೆ ಮುಂದುವರೆಸಲಾಗಿದೆ. ಅಧಿಕಾರಿಗಳ ದಂಡ ಪ್ರಯೋಗ ಕೇವಲ ಕಣ್ಣು ಒರೆಸುವ ತಂತ್ರ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕೆಸುವಿನಹಕ್ಲು ಗ್ರಾಮವು ಸಾರಗೋಡು ಮೀಸಲು ಅರಣ್ಯಕ್ಕೆ ಸನಿಹವಿದ್ದು, ಅರಣ್ಯ ವ್ಯಾಪ್ತಿಯ ಪಕ್ಕದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಕುಂದೂರು ಸಾರಗೋಡು ಮತ್ತು ಕಂಚಿನಕಲ್ ದುರ್ಗದ ಪಕ್ಕದ ಅರಣ್ಯ ಭಾಗದಲ್ಲಿ ಆನೆಗಳು ಸಾಗುವ ಮಾರ್ಗವಿದೆ. ಆದರೆ, ಇಲ್ಲಿ ನಡೆಯುವ ಗಣಿಗಾರಿಕೆಯ ಸ್ಫೋಟದಿಂದ ವಿಚಲಿತವಾಗಿರುವ ವನ್ಯಜೀವಿಗಳು ನಾಡಿನ ಕಡೆಗೆ ಬರಲು ಆರಂಭಿಸಿದ್ದು, ಕಂಚಿನಕಲ್ ದುರ್ಗದಲ್ಲಿ ಇಬ್ಬರು ಆನೆ ತುಳಿತದಿಂದ ಮೃತಪಟ್ಟಿದ್ದಾರೆ’ ಎಂದು ಜೆಡಿಎಸ್ ಮುಖಂಡ ಗುಡ್ಡದೂರು ರಘು ಹೇಳಿದರು.
ಜನರ ಅಪ್ರಾಯವಿಲ್ಲದೇ ಅನುಮತಿ ನೀಡಿದ ಗ್ರಾ.ಪಂ: ‘ಇದು ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಸುವಂತಿಲ್ಲ ಎಂದು 2011ರಲ್ಲಿ ಮಾಧವ್ ಗಾಡ್ಗಿಳ್, 2013ರಲ್ಲಿ ಕಸ್ತೂರಿರಂಗನ್ ವರದಿಗಳು ಹೇಳುತ್ತವೆ. ಆದರೂ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡಿದೆ. ಯೋಜನೆ ಜಾರಿಗೆ ತರುವ ಮುನ್ನ ಗ್ರಾಮಸ್ಥರ ಅಭಿಪ್ರಾಯ ಪಡೆಯಬೇಕು. ಒಪ್ಪಿಗೆ ಪಡೆದ ಬಳಿಕ ಸ್ಥಳೀಯ ಪಂಚಾಯಿತಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಾಭಿಪ್ರಾಯ ಪಡೆಯದೆ ಅನುಮತಿ ನೀಡಿದ್ದಾರೆ. ಈ ಕಲ್ಲು ಗಣಿಗಾರಿಕೆಗೆ ಪ್ರಭಾವಿ ರಾಜಕೀಯ ಮುಖಂಡರ ಬೆಂಬಲವಿದೆ’ ಎಂದು ಯುನೈಟೆಡ್ ಪ್ಲಾಂಟೆಡ್ ಅಸೋಸಿಯೇಷನ್ ಆಫ್ ಸೌತರ್ನ್ ಇಂಡಿಯಾ ಒಕ್ಕೂಟದ ಅಧ್ಯಕ್ಷ ಅಜಯ್ ತಿಪ್ಪಯ್ಯ ಆರೋಪಿಸಿದರು.
‘ಕ್ರಷರ್‌ಗೆ 20 ವರ್ಷ ಗುತ್ತಿಗೆ ಅನುಮತಿ ನೀಡಲಾಗಿದ್ದು, 3 ವರ್ಷಕ್ಕೊಮ್ಮೆ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಕಲ್ಲು ಸ್ಫೋಟ ಮತ್ತು ಲಾರಿಗಳ ಓಡಾಟದಿಂದ ಚಂಡಗೋಡು ಗ್ರಾಮದ ಸರ್ಕಾರಿ ಶಾಲೆ ಗೋಡೆ ಬಿರುಕು ಬಿಟ್ಟಿದ್ದು, ತೆರವು ಕೂಡ ಮಾಡಲಾಗಿದೆ. ಕಂಪನದ ತೀವ್ರತೆಗೆ ನಮ್ಮ ತೋಟದಲ್ಲಿ ರಿವಿಟ್ಮೆಂಟ್ ಉದುರಿ ಹೋಗಿತ್ತು. ಇದರ ಬಗ್ಗೆ ಗ್ರಾಮಸ್ಥರೆಲ್ಲ ಸೇರಿ ಸಹಿ ಸಂಗ್ರಹಿಸಿ ಅರಣ್ಯ ಇಲಾಖೆ ಸಚಿವ, ಜಿಲ್ಲಾಧಿಕಾರಿ, ಶಾಸಕರು, ಕಂದಾಯ ಸಚಿವರಿಗೆ 2024ನೇ ಆಗಸ್ಟ್‌ನಲ್ಲಿ ದೂರು ಸಲ್ಲಿಸಲಾಗಿದೆ. ಇನ್ನಾದರೂ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ಎಲ್ಲಾ ಇಲಾಖೆ ಪರವಾನಗಿ ಪಡೆಯಲಾಗಿದೆ’
ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಇಲಾಖೆಗಳ ಪರವಾನಗಿ ಪಡೆದು ಕ್ರಷರ್ ನಡೆಸಲಾಗುತ್ತಿದ್ದು, ಸರ್ಕಾರಕ್ಕೆ ತೆರಿಗೆ ಕೂಡ ಸಕಾಲಕ್ಕೆ ಪಾವತಿಸಲಾಗುತ್ತಿದೆ ಎಂದು ಕ್ರಷರ್ ಮುಖ್ಯಸ್ಥ ಮಂಚೇಗೌಡ ಸ್ಪಷ್ಟಪಡಿಸಿದರು. ‘ರಸ್ತೆ ಧೂಳಾಗದಂತೆ ನೀರನ್ನೂ ಹಾಕಲಾಗುತ್ತಿದ್ದು, ಕಾನೂನು ಉಲ್ಲಂಘನೆಯಾದಾಗ ದಂಡ ಪಾವತಿಸುವುದು ಸಹಜ. ಆದರೆ, ನಿಗದಿಗಿಂತ ಹೆಚ್ಚು ತೂಕದ ಜಲ್ಲಿ ಸಾಗಿಸುತ್ತಿಲ್ಲ. ಓವರ್ ಲೋಡ್ ಸಾಗಾಟಕ್ಕೆ ಅವಕಾಶ ನೀಡಿಲ್ಲ. ರಸ್ತೆ ಗುಂಡಿಗಳಿಗೂ ಜಲ್ಲಿ ಪುಡಿ ಹಾಕಿ ದುರಸ್ತಿ ಕೂಡ ಮಾಡಿಸಿದ್ದೇವೆ’ ಎಂದು ತಿಳಿಸಿದರು.
ಕಂಚಿನಕಲ್ ದುರ್ಗದಿಂದ ಆಲ್ದೂರು ಮಾರ್ಗದ ಸೇತುವೆಗಳೆಲ್ಲ ಹಳೆಯದಾಗಿದ್ದು, ಕ್ರಷರ್ ಲಾರಿಗಳ ಸಂಚಾರದಿಂದ ಶಿಥಿಲಾವಸ್ಥೆ ತಲುಪಿವೆ. ಈ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲಗುಡ್ಡದೂರು ರಘು,ಜೆಡಿಎಸ್ ಮುಖಂಡ,
ಯಾವುದೇ ಸ್ಫೋಟ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಕ್ರಷರ್‌ನವರು ಅನುಮತಿ ಪಡೆದಿಲ್ಲ ಅನುಮತಿ ಇಲ್ಲದೇ ಸ್ಫೋಟಕ ಬಳಸುವಾಗ ಜೀವ ಹಾನಿಗಳಾದರೆ ಯಾರು ಹೊಣೆಅಜಯ್ ತಿಪ್ಪಯ್ಯ, ಯುನೈಟೆಡ್ ಪ್ಲಾಂಟೆಡ್ ಅಸೋಸಿಯೇಷನ್
ಕೆಂದಳ ಹಕ್ಲು ಕಲ್ಲು ಗಣಿಗಾರಿಕೆ ಕುರಿತು ಈಗಾಗಲೇ ಹಲವು ದೂರುಗಳು ಬಂದಿವೆ. ಕ್ರಷರ್‌ಗೆ ನೋಟಿಸ್ ನೀಡುವಂತೆ ತಾಲ್ಲೂಕು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆನಾಗರಾಜ್,ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.