ADVERTISEMENT

ಜಾತಿ ವಿಷಬೀಜ ಬಿತ್ತುವವರನ್ನು ದೂರವಿಡಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 1:49 IST
Last Updated 24 ಏಪ್ರಿಲ್ 2023, 1:49 IST
ಜನರನ್ನುದ್ದೇಶಿಸಿ ಶಾಸಕ ಸಿ.ಟಿ.ರವಿ ಮಾತನಾಡಿದರು.
ಜನರನ್ನುದ್ದೇಶಿಸಿ ಶಾಸಕ ಸಿ.ಟಿ.ರವಿ ಮಾತನಾಡಿದರು.   

ಕಡೂರು: ‘ಜಾತಿ ಜಾತಿಗಳ ನಡುವೆ ದ್ವೇಷ ತಂದಿಟ್ಟು ಅಧಿಕಾರಕ್ಕೇರಲು ಕಾಂಗ್ರೆಸ್‌ ಹವಣಿಸುತ್ತಿದೆ. ಆ ಪಕ್ಷದ ಆಟ ನಡೆಯಲ್ಲ. ಜಾತಿ ವಿಷಬೀಜವನ್ನು ಬಿತ್ತುವವರನ್ನು ಮನೆಗೆ ಕಳಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರರ್ಶಿ ಸಿ.ಟಿ.ರವಿ ಹೇಳಿದರು.

‘ಕಡೂರಿನ ಬಸವೇಶ್ವರ ವೃತ್ತದಲ್ಲಿ ಭಾನುವಾರ ರೋಡ್ ಶೋನಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಜಾತಿ ಜಾತಿಗಳ ನಡುವೆಯೇ ಸಂಘರ್ಷ ತಂದಿಡುವ ಮೂಲಕ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ‘ ಎಂದರು.

‘ಬಿಜೆಪಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನರೇಂದ್ರ ಮೋದಿ ಅವರು ಧರ್ಮರಾಯನ ಸ್ಥಾನದಲ್ಲಿದ್ದಾರೆ. ಅವರು ನೀಡಿದ ಕೊಡುಗೆಗಳು ನಮ್ಮೆಲ್ಲರನ್ನು ನೆಮ್ಮದಿಯಲ್ಲಿರಿಸಿರುವುದು ಸತ್ಯ. ಜನರು ಶ್ರೀಕೃಷ್ಣನ ಸ್ಥಾನದಲ್ಲಿದ್ದಾರೆ. ಕಡೂರಿನಲ್ಲಿ ಬಿಜೆಪಿಯ ಭೀಮನಂತಿರುವ ಬೆಳ್ಳಿಪ್ರಕಾಶ್‌ ಅವರನ್ನು ಗೆಲ್ಲಿಸಲು ಜನರು ಪಣ ತೊಡಬೇಕು‘ ಎಂದು ಮನವಿ ಮಾಡಿದರು.

ADVERTISEMENT

‘ನಾವಿರುವುದು ಬಸವೇಶ್ವರ, ಕನಕದಾಸರಂತಹ ಮಹಾನ್ ದಾರ್ಶನಿಕರು ಹುಟ್ಟಿದ ನೆಲದಲ್ಲಿ. ನಾವೆಂದೂ ಜಾತೀಯತೆ ಮಾಡಿಲ್ಲ. ಮಾಡುವುದೂ ಇಲ್ಲ. ಇವನಾರವ ಎನ್ನದೆ ಇವ ನಮ್ಮವ ಎಂಬ ಬಸವಣ್ಣನವರ ಮಾತು ನಮಗೆ ದಾರಿ ದೀಪವಾಗಿದೆ‘ ಎಂದರು.

ಶಾಸಕ ಬೆಳ್ಳಿ ಪ್ರಕಾಶ್, ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ವಕ್ತಾರ ಕೆ.ಆರ್.ಮಹೇಶ ಒಡೆಯರ್,ಕೋಶಾಧ್ಯಕ್ಷ ದಾನಿ ಉಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಶೂದ್ರಶ್ರೀನಿವಾಸ್ ಇದ್ದರು.

ರೋಡ್‌ ಶೋದಿಂದ ವಾಹನ ಸಂಚಾರಕ್ಕೆ ಅಡಚಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋಗೆಂದು ಜನಸಾಗರ ಹರಿದುಬಂದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿ ವಾಹನಗಳು ಸಾಲುಗಟ್ಟಿ ನಿಂತವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಜೆ 8 ಗಂಟೆಗೆ ರೋಡ್‌ ಶೋದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರು ಆಗಮಿಸಲಿಲ್ಲ. ಶಾಸಕ ಸಿ.ಟಿ.ರವಿ ಮತ್ತು ಶಾಸಕ ಬೆಳ್ಳಿ ಪ್ರಕಾಶ್‌ ಅವರು ರಾತ್ರಿ 10 ಗಂಟೆ ಹೊತ್ತಿಗೆ ಬಸವೇಶ್ವರ ವೃತ್ತದಲ್ಲಿ ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪೊಲೀಸರು ಮಲ್ಲೇಶ್ವರ ಮೂಲಕ ಸಂಚರಿಸಲು ಬದಲಿ ವ್ಯವಸ್ಥೆ ಮಾಡಿದರು. ರೋಡ್ ಶೋದಿಂದಾಗಿ ವಾಹನ ಸಂಚಾರಕ್ಕೆ ತೊಡಕಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಸ್ಥಳದಲ್ಲಿ ನಿಗಾವಹಿಸಿದ್ದರು.

ಮುಖ್ಯಮಂತ್ರಿ ರೋಡ್ ಷೋ ಪ್ರಯುಕ್ತ ಸೇರಿದ ಜನಸಾಗರದ ನಡುವೆ ವಾಹನಗಳು ಸಾಲುಗಟ್ಟಿ ನಿಂತಿದ್ದವು
ರೋಡ್‌ ಶೋನಲ್ಲಿ ಸೇರಿದ್ದ ಜನಸಮೂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.