ಚಿಕ್ಕಮಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುತ್ಸದ್ದಿ ರಾಜಕಾರಣಿ, ಪ್ರಧಾನಿಯಾಗಿ ಅಪಾರ ಜನಮನ್ನಣೆ ಗಳಿಸಿದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಡಿ. 25ರಂದು ಕ್ರಿಸ್‌ಮಸ್ ಜತೆಗೆ ವಾಜಪೇಯಿ ಅವರ 100ನೇ ಜನ್ಮದಿನ ಆಚರಿಸಲಾಗುತ್ತಿದೆ. ರಾಷ್ಟ್ರ ಭಕ್ತನಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆದ್ಯತೆ ಕೊಟ್ಟವರು. 15 ಸಾವಿರ ಕಿ.ಮೀ ಚತುಷ್ಪಥ ಹೆದ್ದಾರಿ ನಿರ್ಮಿಸಿ ಇಡೀ ರಾಷ್ಟ್ರವನ್ನೇ ಜೋಡಿಸಿದವರು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಬಣ್ಣಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಗ್ರಾಮಗಳನ್ನು ಮುಖ್ಯ ರಸ್ತೆಗೆ ಜೋಡಿಸಿದವರು. ಇಂದು ಮೊಬೈಲ್ ಫೋನ್ ಮನೆ –ಮನೆಯಲ್ಲಿರಲು ಅಡಿಪಾಯ ಹಾಕಿದವರು. ಪೋಖ್ರಾನ್ ಅಣುಸ್ಫೋಟ ಮಾಡಿ ಜಗತ್ತಿಗೆ ದೇಶದ ಸಾಮರ್ಥ್ಯ ತೋರಿಸಿದವರು. ಸ್ನೇಹಕ್ಕಾಗಿ ಲಾಹೋರ್‌ಗೆ ಭೇಟಿ, ಸಮರಕ್ಕಾಗಿ ಕಾರ್ಗಿಲ್ ಯುದ್ಧದ ಗೆಲುವು. ಸರ್ವ ಶಿಕ್ಷಾ ಅಭಿಯಾನದ ಮೂಲಕ ಹೊಸ ಸುಸಜ್ಜಿತ ಶಾಲಾ ಕಟ್ಟಡ, ಶೌಚಾಲಯ, ಸ್ವಜಲಧಾರೆ ಮೂಲಕ ನೀರು ಕೊಟ್ಟವರು ಎಂದು ಹೇಳಿದರು.
‘ಕೇಂದ್ರ ಸರ್ಕಾರ ಕೂಡ ಅವರ 100ನೇ ಜನ್ಮ ದಿನವನ್ನು ಸುಶಾಸನ ದಿನವಾಗಿ ಆಚರಿಸುತ್ತಿದೆ. ರಾಮಮಂದಿರ ನಿರ್ಮಿಸುವ, ಕಾಶ್ಮೀರದ 370 ವಿಧಿ ರದ್ದು ಮಾಡುವ ಅಟಲ್ ಜಿ ಅವರ ಕನಸನ್ನು ಪ್ರಧಾನಿ ಮೋದಿ ನನಸು ಮಾಡಿದ್ದಾರೆ. ಏಕ ನಾಗರಿಕ ಸಂಹಿತೆ ಇನ್ನೊಂದು ಅವರ ಕನಸು ಬಾಕಿ ಉಳಿದಿದೆ. ಬಿಜೆಪಿಯೇ ಅವರ ಕನಸನ್ನು ನನಸು ಮಾಡಲಿದೆ’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಉಪಾಧ್ಯಕ್ಷ ಕನಕರಾಜ ಅರಸ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಪಿ. ವೆಂಕಟೇಶ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.