ನರಸಿಂಹರಾಜಪುರ: ‘ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ಬಿಡುವುದಿಲ್ಲ. ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
‘ಪ್ರಜಾವಾಣಿ’ಯ ಮಂಗಳ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಸಲಕರಣೆ ನೀಡದ ಹೊರಗುತ್ತಿಗೆ ಸಂಸ್ಥೆ ಡಯಾಲಿಸಿಸ್ ಸೇವೆ ಸ್ಥಗಿತ ಭೀತಿ’ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಡಯಾಲಿಸಿಸ್ ಕೇಂದ್ರದಲ್ಲಿ ಸೇವೆ ಒದಗಿಸುತ್ತಿದ್ದ ಸಂಸ್ಥೆಯ ಟೆಂಡರ್ ಅವಧಿ ಪೂರ್ಣಗೊಂಡಿರುವುದರಿಂದ ಸರ್ಕಾರ ಹೊಸದಾಗಿ ಟೆಂಡರ್ ಕರೆದಿದೆ. ಈ ಪ್ರಕ್ರಿಯೆ ಪೂರ್ಣ ಗೊಳ್ಳಲು ಸಾಕಷ್ಟು ಅವಧಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಬಳಕೆದಾರರ ನಿಧಿ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಅನುದಾನ ಬಳಸಿಕೊಂಡು ಡಯಾಲಿಸಿಸ್‌ಗೆ ಒಳಗಾಗುವವರಿಗೆ ಸೇವೆ ಒದಗಿಸುವಂತೆ, ರೋಗಿಗಳಿಗೆ ತೊಂದರೆಯಾಗದಂತೆ ಗಮನ ಹರಿಸುವಂತೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವೀರ ಪ್ರಸಾದ್ ಹಾಗೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ ಅವರಿಗೂ ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.