ADVERTISEMENT

ಕಳಸ: ದಲಿತ ಯುವಕನ ಆತ್ಮಹತ್ಯೆಗೆ ಕಾರಣದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:58 IST
Last Updated 18 ಆಗಸ್ಟ್ 2025, 2:58 IST
ಕಳಸ ತಾಲ್ಲೂಕಿನ ಸಂಸೆಯ ದಲಿತ ಯುವಕ ನಾಗೇಶ್ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ನಿಯೋಗ ಡಿವೈಎಸ್‍ಪಿ ಬಾಲಾಜಿ ಸಿಂಗ್ ಅವರನ್ನು ಒತ್ತಾಯಿಸಿತು
ಕಳಸ ತಾಲ್ಲೂಕಿನ ಸಂಸೆಯ ದಲಿತ ಯುವಕ ನಾಗೇಶ್ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ನಿಯೋಗ ಡಿವೈಎಸ್‍ಪಿ ಬಾಲಾಜಿ ಸಿಂಗ್ ಅವರನ್ನು ಒತ್ತಾಯಿಸಿತು   

ಕಳಸ: ಕಳೆದ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ದಲಿತ ಯುವಕ ನಾಗೇಶ್ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಜತೆಗೆ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ನಾಗರಿಕ ಹಕ್ಕುಗಳ ರಕ್ಷಣಾ ಸಂಘ ಒತ್ತಾಯಿಸಿದೆ.

ಸಂಘದ ಮುಖಂಡರಾದ ಅಖಿಲ ವಿದ್ಯಾಚಂದ್ರ, ನಯಾಜ್, ಪದಾಧಿಕಾರಿಗಳಾದ ಸಂಜಯ್, ವಸೀಮ್, ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪ, ಮೊಹಮ್ಮದ್ ಸಮೀಉಲ್ಲಾ, ದಲಿತ ಸಂಘರ್ಷ ಸಮಿತಿಯ ಆಶಾ ಸಂತೋಷ್ ಒಳಗೊಂಡ ತಂಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದು,‌  ನಾಗೇಶ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ವಹಿಸಬೇಕು. ಇದೇ ಪ್ರಕರಣದಲ್ಲಿ ಕುದುರೆಮುಖ ಠಾಣಾಧಿಕಾರಿ ಆದರ್ಶ ಕೂಡ ತಪ್ಪಿತಸ್ಥರಾಗಿದ್ದು, ಅವರನ್ನು ಕೂಡ ಅಮಾನತು ಮಾಡಬೇಕು ಎಂದು ನಿಯೋಗ ಒತ್ತಾಯಿಸಿದೆ.

ಕಳಸ ಪೊಲೀಸ್ ಠಾಣೆಯಲ್ಲಿ ಡಿವೈಎಸ್‍ಪಿ ಬಾಲಾಜಿ ಸಿಂಗ್ ಜತೆ ಸಮಾಲೋಚನೆ ನಡೆಸಿದ ನಿಯೋಗ ಸದಸ್ಯರು, ಪೊಲೀಸ್ ಕಾನ್‌ಸ್ಟೆಬಲ್ ಸಿದ್ದೇಶ್ ಮತ್ತು ಇತರೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದೂ ನಿಯೋಗ ಎಚ್ಚರಿಕೆ ನೀಡಿದರು.

ADVERTISEMENT

ನಾಗೇಶ್ ಸಾವಿಗೆ ನ್ಯಾಯ ಕೊಡಿಸುವ ಬಗ್ಗೆ ಮತ್ತು ಕುಟುಂಬಕ್ಕೆ ಪರಿಹಾರಧನ ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಹೋರಾಟ ಮುಂದುವರೆಸಲಾಗುವುದು ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.