ಆಲ್ದೂರು: ಸತತ ಮಳೆಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿದ್ದು, ಸವಾರರು ಪರದಾಡುತ್ತಿದ್ದಾರೆ. ಬಾಕ್ಸ್ ಚರಂಡಿ ಕಟ್ಟಿಕೊಂಡಿದ್ದು, ಮಳೆ ನೀರು ಹರಿದುಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ನಿಲ್ಲುತ್ತಿದ್ದು, ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿದೆ.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ, ಅಂಬೇಡ್ಕರ್ ವೃತ್ತದ ತಿರುವು, ಸರ್ಕಾರಿ ಪ್ರೌಢಶಾಲೆಯ ಪರಿಸರದಲ್ಲಿ ಹೆಜ್ಜೆಗೊಂದರಂತೆ ಗುಂಡಿಗಳು ಸೃಷ್ಟಿಯಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಚರಂಡಿ ಇಲ್ಲದೆ ರಸ್ತೆ ಮೇಲೆ ನೀರು ನಿಂತು ಗುಂಡಿಗಳು ಅಪಾಯಕಾರಿಯಾಗಿ ಬಾಯ್ತೆರೆದು ನಿಂತಿವೆ. ಮಳೆ ನೀರು ಮತ್ತು ಕೊಳಚೆ ನೀರು ಆರೋಗ್ಯ ಕೇಂದ್ರದ ಆವರಣದೊಳಗೆ ನುಗ್ಗುತ್ತಿದ್ದು ಜನರು ಪರದಾಡುವಂತಾಗಿದೆ. ‘ಸರ್ಕಾರ ಡೆಂಗಿ ಜ್ವರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ, ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲೇ ಮಳೆ ನೀರು ಕಟ್ಟಿಕೊಂಡು ನಿಲ್ಲುವಂತಾಗಿದೆ’ ಎಂದು ಅರೇನೂರು ಸುಪ್ರೀತ್ ದೂರಿದರು.
ಅಂಬೇಡ್ಕರ್ ವೃತ್ತದ ತಿರುವಿನಲ್ಲಿ ದೊಡ್ಡ ಗುಂಡಿಯಿದ್ದು, ಇದರ ಅರಿವಿಲ್ಲದೆ ಬರುವ ವಾಹನ ಸವಾರರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಂಭಾಗದ ರಸ್ತೆಯಲ್ಲಿ ಗುಂಡಿಯಿಂದ ಈಚೆಗೆ ಅಪಘಾತ ಸಂಭವಿಸಿ ವಿದ್ಯಾರ್ಥಿಗೆ ಗಂಭೀರ ಗಾಯವಾಗಿತ್ತು. ಈ ವೃತ್ತದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ವಾಹನ ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಕೆ.ಮೂರ್ತಿ, ರವಿ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಆಲಿ ಬೇಸರ ವ್ಯಕ್ತಪಡಿಸಿದರು. ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿ ಸಮಸ್ಯೆನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಒತ್ತಾಯಿಸಿದರು.
ಕಟ್ಟಿಕೊಂಡಿರುವ ಚರಂಡಿಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಗುಂಡಿ ರಸ್ತೆಯ ಬದಿಯ ನಿರ್ವಹಣೆಗೆ ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲಾಗುವುದು
-ಪಿಡಿಓ ಶಂಶೂನ್ ನಹರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.