ADVERTISEMENT

ಶಿಷ್ಟರ ರಕ್ಷಣೆ ದಸರೆಯ ಉದ್ದೇಶ

ರಂಭಾಪುರಿ: ನವರಾತ್ರಿ ಉತ್ಸವಕ್ಕೆ ಸಿ.ಎಂ ಯಡಿಯೂರಪ್ಪ ಆನ್‌ಲೈನ್‌ನಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 5:44 IST
Last Updated 18 ಅಕ್ಟೋಬರ್ 2020, 5:44 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಶನಿವಾರ ಆರಂಭಗೊಂಡ ನವರಾತ್ರಿ ಉತ್ಸವವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್‌ಲೈನ್ ಮೂಲಕ ಉಧ್ಘಾಟಿಸಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಶನಿವಾರ ಆರಂಭಗೊಂಡ ನವರಾತ್ರಿ ಉತ್ಸವವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್‌ಲೈನ್ ಮೂಲಕ ಉಧ್ಘಾಟಿಸಿದರು.   

ಬಾಳೆಹೊನ್ನೂರು: ‘ಸುದೀರ್ಘ ಇತಿಹಾಸವಿರುವ ರಂಭಾಪುರಿ ಪೀಠದಲ್ಲಿ ಸ್ವಾಮೀಜಿಗಳ 29ನೇ ವರ್ಷದ ದಸರಾ ಧರ್ಮ ಸಮಾರಂಭ ಸಂಯೋಜನೆಗೊಂಡಿರುವುದು ಸಂತ ಸದ ಸಂಗತಿ. ಸ್ವಾಸ್ಥ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಪೀಠಗಳ ಕೊಡುಗೆ ಅಪಾರ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪೀಠದಲ್ಲಿ ಶನಿವಾರ ಆರಂಭಗೊಂಡ 29ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಮಾನವ ಧರ್ಮಕ್ಕೆ ಜಯವಾಗಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಸತ್ಯ ಸಂದೇಶವನ್ನು ಈ ನಾಡಿಗೆ ಕೊಟ್ಟಿದ್ದಾರೆ. ದುಷ್ಟರ ದಮನ ಶಿಷ್ಟ ಜನರ ಸಂರಕ್ಷಣೆಯಾಗಬೇಕೆಂಬುದು ದಸರೆಯ ಉದ್ದೇಶ. ಈ ಸಂದರ್ಭದಲ್ಲಿ ರಾಜ್ಯ ಸುಭಿಕ್ಷೆಯಾಗಿ, ಕೊರೊನಾ ಸಮಸ್ಯೆ ದೂರವಾಗಲಿ’ ಎಂದರು.

ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ, ‘ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಮತ್ತು ಸದ್ಗುಣವಂತರ ಮಾರ್ಗದರ್ಶನ ಅವಶ್ಯಕ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಸಂರಕ್ಷಣೆಯಿಂದ ಜಗದಲ್ಲಿ ಸುಖ ಶಾಂತಿ ಪ್ರಾಪ್ತವಾಗಲು ಸಾಧ್ಯವಾಗುವುದು. ಧರ್ಮ ಪ್ರಧಾನವಾದ ಈ ರಾಷ್ಟ್ರದಲ್ಲಿ ಹಲವಾರು ಮತ ಧರ್ಮಗಳು ಬೆಳೆದು ಬಂದಿವೆ. ನವರಾತ್ರಿ ಹತ್ತು ದಿನಗಳ ನಾಡಹಬ್ಬ. ಶಿವನನ್ನು ಬಿಟ್ಟು ಶಕ್ತಿ ಶಕ್ತಿ ಬಿಟ್ಟು ಶಿವನಿಲ್ಲ ಎಂಬುದಕ್ಕೆ ವೀರಶೈವ ಸಿದ್ಧಾಂತ ಸಾಕ್ಷಿಯಾಗಿದೆ. ರಘುವಂಶ ಕಾವ್ಯದಲ್ಲಿ ಕವಿ ಕಾಳಿದಾಸ ಶಬ್ದವನ್ನು ಬಿಟ್ಟು ಅರ್ಥ ಅರ್ಥವನ್ನು ಬಿಟ್ಟು ಶಬ್ದ ಹೇಗೆ ಇಲ್ಲವೋ ಹಾಗೆಯೇ ಶಿವಶಕ್ತಿ ಒಂದಾಗಿರುವುದನ್ನು ಕಾಣುತ್ತೇವೆ. ಪೂರ್ವಕಾಲದಲ್ಲಿ ವಿಜಯನಗರ ಅರಸರು ತದನಂತರ ಮೈಸೂರು ಮಹಾರಾಜರು ನವರಾತ್ರಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದ ಇತಿಹಾಸವಿದೆ’ ಎಂದರು.

ADVERTISEMENT

ಪೂರ್ವದ ಸ್ವಾಮೀಜಿಗಳ ಪರಿಶ್ರಮ ಸಾಧನೆಯಲ್ಲಿ ಬೆಳೆದ ನವರಾತ್ರಿ ದಸರಾ ಹಬ್ಬ ಇಂದು ಬಹು ದೊಡ್ಡದಾಗಿ ಬೆಳೆದಿರುವುದು ಅವರೆಲ್ಲರ ಆಶೀರ್ವಾದದ ಫಲ. ಈ ವರ್ಷ ಹಾಸನ ಜಿಲ್ಲೆ ಬೇಲೂರಿ ನಲ್ಲಿ ದಸರಾ ಮಹೋತ್ಸವ ಜರುಗಬೇಕಾ ಗಿತ್ತು. ಆದರೆ, ಜಗತ್ತಿನಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಮತ್ತು ಸರ್ಕಾರದ ನಿಬಂಧನೆ ಗಳಿರುವುದರಿಂದ ಸಾಂಕೇತಿಕವಾಗಿ ಅತ್ಯಂತ ಸರಳವಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನವರಾತ್ರಿ ಯಲ್ಲಿ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಹೆಸರಿನಿಂದಲೂ ಪೂಜಿಸುತ್ತಾರೆ. ನವಶಕ್ತಿ ಆರಾಧನೆಯಲ್ಲಿ ಮೊದಲಿಗೆ ಶೈಲಪುತ್ರಿ ನಾಮಾಂಕಿತದಲ್ಲಿ ದೇವಿ ಪೂಜೆಗೊಳ್ಳುತ್ತಿದ್ದಾಳೆ’ ಎಂದರು.

ಶಾಸಕ ಟಿ.ಡಿ. ರಾಜೇಗೌಡ, ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಅಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ. ಶಿವಮೊಗ್ಗದ ಶಾಂತಾ ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.