ADVERTISEMENT

ವಿಗ್ರಹ ಒಯ್ಯಲು ಅನುಮತಿಗೆ ಪಟ್ಟು; ಪ್ರತಿಭಟನೆ

l ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ l ಬಸವನಹಳ್ಳಿ ಮುಖ್ಯರಸ್ತೆ ಶಂಕರಮಠ ಬಳಿ ಧಾರ್ಮಿಕ ಸಭೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 6:40 IST
Last Updated 14 ಅಕ್ಟೋಬರ್ 2019, 6:40 IST
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದ ಬಳಿ ದತ್ತ ಭಕ್ತರು, ಮುಖಂಡರು ಪ್ರತಿಭಟನೆ ಮಾಡಿದರು (ಎಡಚಿತ್ರ) ಶ್ರೀರಾಮ ಸೇನೆಯವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯಲ್ಲಿ ಮೌನ ಮೆರವಣಿಗೆಯಲ್ಲಿ ಸಾಗಿದರು. ಪ್ರಮೋದ್‌ ಮುತಾಲಿಕ್‌, ಗಂಗಾಧರ್‌ ಕುಲಕರ್ಣಿ, ರಂಜಿತ್ ಶೆಟ್ಟಿ, ಮಹೇಶ್‌ ಕಟ್ಟಿನಮನಿ ಇದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದ ಬಳಿ ದತ್ತ ಭಕ್ತರು, ಮುಖಂಡರು ಪ್ರತಿಭಟನೆ ಮಾಡಿದರು (ಎಡಚಿತ್ರ) ಶ್ರೀರಾಮ ಸೇನೆಯವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯಲ್ಲಿ ಮೌನ ಮೆರವಣಿಗೆಯಲ್ಲಿ ಸಾಗಿದರು. ಪ್ರಮೋದ್‌ ಮುತಾಲಿಕ್‌, ಗಂಗಾಧರ್‌ ಕುಲಕರ್ಣಿ, ರಂಜಿತ್ ಶೆಟ್ಟಿ, ಮಹೇಶ್‌ ಕಟ್ಟಿನಮನಿ ಇದ್ದಾರೆ.   

ಚಿಕ್ಕಮಗಳೂರು: ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ಶೋಭಾಯಾತ್ರೆಯಲ್ಲಿ ಗುರುದತ್ತಾತ್ರೇಯ ಶಿಲಾಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ಯಲು ಜಿಲ್ಲಾಡಳಿತ ಅನುಮತಿ ನೀಡದಿದ್ದಕ್ಕೆ ಸಂಘಟನೆಯ ಕಾರ್ಯ ಕರ್ತರು, ಮುಖಂಡರು, ದತ್ತಭಕ್ತರು ಭಾನುವಾರ ಪ್ರತಿಭಟನೆ ನಡೆಸಿದರು.

ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದ ಬಳಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಧಾರ್ಮಿಕ ಸಭೆ ನಂತರ ಅಲ್ಲಿಯೇ ಪ್ರತಿಭಟನೆ ಮಾಡಿದರು. ಭಜನೆ ಮಾಡಿ ದತ್ತಾತ್ರೇಯ ಸ್ಮರಣೆ ಮಾಡಿದರು. ರಾಜ್ಯ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಒಯ್ಯಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಸುಮಾರು ಒಂದು ಗಂಟೆ ಪ್ರತಿಭಟನೆ ಮಾಡಿದರು.

ಪ್ರತಿಭಟನೆಗೆ ಜಿಲ್ಲಾಡಳಿತ ಮಣಿಯ ಲಿಲ್ಲ. ಸಂಘಟನೆಯ ಪದಾಧಿಕಾರಿಗಳು ತುರ್ತು ಸಭೆ ನಡೆಸಿ ಶೋಭಾಯಾತ್ರೆ ಕೈಬಿಟ್ಟು ಮೌನಮೆರವಣಿಗೆ ಪ್ರತಿಭಟನೆ ಮಾಡಲು ನಿರ್ಧರಿಸಿದರು. ಅದರಂತೆ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವ ರೆಗೆ ಮೌನಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಶೋಭಾಯಾತ್ರೆ ಕಲಾ ಮೆರುಗಿಗೆ ಬಂದಿದ್ದ ಚಂಡೆವಾದ್ಯ ತಂಡದವರು ಶಂಕರಮಠದಲ್ಲಿ ವಾದ್ಯಸೇವೆ ನಡೆಸಿ, ಮೆರವಣಿಗೆಯಲ್ಲಿ ಮೌನವಾಗಿ ಸಾಗಿದರು.

ಪುನನ್ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಹುಲ್‌ಕೌಲ್, ಕಾಳಿಮಠದ ರಿಷಿಕುಮಾರ ಸ್ವಾಮೀಜಿ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಂತೋಷ್ ಅಡ್ಯಾರ್, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಸದಸ್ಯರಾದ ಶಿವಕುಮಾರ್, ಮಹೇಶ್ ಇದ್ದರು.

‘ರಾಜಕೀಯಕ್ಕೆ ಬಳಸಿಕೊಳ್ಳಬೇಡಿ’

ಚಿಕ್ಕಮಗಳೂರು: ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ದತ್ತಪೀಠಕ್ಕಾಗಿ ದೂರದೂರಿನಂದ ಬಂದು ಪ್ರತಿಭಟನೆ ನಡೆಸುವ ಸ್ಥಿತಿ ಎದುರಾಗಿದೆ. ದತ್ತಪೀಠ ವಿಚಾರ ಬಳಸಿಕೊಂಡು ಸಂಸದರಾಗಿ, ಶಾಸಕರಾಗಿ ಕೆಲವರು ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳದೆ ರಾಷ್ಟ್ರೀಯತೆ, ಆಧ್ಯಾತ್ಮಿಕತೆ, ವಾಸ್ತವಿಕತೆ ನೆಲೆಗಟ್ಟಿನಲ್ಲಿ ನೋಡಬೇಕು ಎಂದು ಮನವಿ ಮಾಡಿದರು.

ದತ್ತಪೀಠ ಇರುವ ಗ್ರಾಮದ ಹೆಸರೇ ಇನಾಂ ದತ್ತಾತ್ರೇಯ ಪೀಠ. ಇದು ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಇದೆ. ದತ್ತ ಪೀಠದ ವಿಚಾರಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಎಲ್ಲ ಗೊತ್ತಿದೆ. ಈ ಪೀಠವನ್ನು ಹಿಂದುಗಳಿಗೆ ಒಪ್ಪಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಕೋರಿದರು.

ಪುನನ್ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಹುಲ್ ಕೌಲ್ ಮಾತನಾಡಿ, ‘ದತ್ತಪೀಠ ಹಿಂದೂಗಳ ಆಸ್ತಿ. ಈ ಬಗ್ಗೆ ಸಮುದಾಯದ ಒಗ್ಗೂಡಿ ಹೋರಾಟ ಮಾಡಬೇಕು’ ಎಂದರು.

ಶ್ರೀರಾಮಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರಕುಲಕರ್ಣಿ ಮಾತನಾಡಿ, ‘ದತ್ತಪೀಠದಲ್ಲಿ ಕದ್ದುಮುಚ್ಚಿ ಗುರುದತ್ತಾತ್ರೇಯ ವಿಗ್ರಹ ಸ್ಥಾಪಿಸುವುದಿಲ್ಲ. ಎಲ್ಲರ ಸಮಕ್ಷಮದಲ್ಲಿ ವಿಗ್ರಹ ಸ್ಥಾಪಿಸಲಾಗುತ್ತದೆ’ ಎಂದು ಹೇಳಿದರು.

‘ಸರ್ಕಾರದ ನಡೆ ಖಂಡನೀಯ’

ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ, ‘ಮೆರವಣಿಗೆಯಲ್ಲಿ ಶಿಲಾ ವಿಗ್ರಹ ಒಯ್ಯಲು ಸರ್ಕಾರ ಅನುಮತಿ ನಿರಾಕರಿಸಿ, ಗುರುದತ್ತಾತ್ರೇಯ ಸ್ವಾಮಿಗೆ ಸರ್ಕಾರ ಅಪಮಾನ ಮಾಡಿದೆ. ಈ ಕ್ಷೇತ್ರದ ಶಾಸಕರು ದತ್ತಪೀಠ ವಿಚಾರ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈಗ ಸಚಿವರೂ ಆಗಿದ್ದಾರೆ. ಸರ್ಕಾರದ ಈ ನಡೆ ಸರಿಯಲ್ಲ’ ಎಂದು ದೂಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.