ADVERTISEMENT

ದತ್ತಪಾದುಕೆ ದರ್ಶನ; ನಮನ, ದತ್ತಜಯಂತಿಗೆ ಶಾಂತಿಯುತ ತೆರೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 14:48 IST
Last Updated 22 ಡಿಸೆಂಬರ್ 2018, 14:48 IST
ದತ್ತಪೀಠದ ಕಬ್ಬಿಣದಪಂಜರ ಮಾರ್ಗದಲ್ಲಿ ಭಕ್ತರು ಪಾದುಕೆ ದರ್ಶನಕ್ಕೆ ಸಾಗಿದರು.
ದತ್ತಪೀಠದ ಕಬ್ಬಿಣದಪಂಜರ ಮಾರ್ಗದಲ್ಲಿ ಭಕ್ತರು ಪಾದುಕೆ ದರ್ಶನಕ್ಕೆ ಸಾಗಿದರು.   

ಚಿಕ್ಕಮಗಳೂರು: ದತ್ತ ಜಯಂತಿಗೆ ರಾಜ್ಯದ ವಿವಿಧೆಡೆಗಳಿಂದ ಶನಿವಾರ ಬಂದಿದ್ದ ಭಕ್ತರ ದಂಡು ಇನಾಂ ದತ್ತ (ಐ.ಡಿ) ಪೀಠದ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಭಕ್ತಿ ಸರ್ಮಪಿಸಿದರು

ನಸುಕಿನಿಂದಲೇ ಗಿರಿಶ್ರೇಣಿ ಮಾರ್ಗದಲ್ಲಿ ದತ್ತಮಾಲಾಧಾರಿಗಳ ಕಲರವ ಮೇಳೈಸಿತ್ತು. ಮಾಲಾಧಾರಿಗಳು ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿದರು. ಮಾರ್ಗಮಧ್ಯೆ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಹೊನ್ನಮದೇವಿಗೆ ನಮಿಸಿ ಮುಂದಕ್ಕೆ ಸಾಗಿದರು.

ದತ್ತಪೀಠದಲ್ಲಿ ಭಕ್ತರು ಪ್ರವೇಶ ದ್ವಾರದ ಮೂಲಕ ಸರತಿಯಲ್ಲಿ ಒಬ್ಬೊಬ್ಬರಾಗಿ ತೆರಳಿ ಗುಹೆಯೊಳಗಿನ ಪಾದುಕೆ ದರ್ಶನ ಮಾಡಿದರು. ಹರಕೆ ಸಲ್ಲಿಸಿದರು. ಪಾದುಕೆ ದರ್ಶನಕ್ಕೆ ಸಂಜೆವರೆಗೂ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ನೂಕುನುಗ್ಗಲು, ಅಬ್ಬರ ಇರಲಿಲ್ಲ.

ADVERTISEMENT

ಭಕ್ತರು ಮತ್ತು ವಾಹನಗಳ ದಟ್ಟಣೆ ಕಡಿಮೆ ಇತ್ತು. ಗಿರಿ ಶ್ರೇಣಿಯಲ್ಲಿ ಕೇಸರಿ ಕಲರವ ಇತ್ತು. ಭಗವಧ್ವಜಗಳ ಹಾರಾಟ, ಕೇಸರಿ ವಸ್ತ್ರಧಾರಿಗಳ ಓಡಾಟ ಜೋರಾಗಿತ್ತು.

ವಿಶ್ವ ಹಿಂದು ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ದತ್ತಪೀಠದ ಸನಿಹದ ಸಭಾಂಗಣದಲ್ಲಿ ಗಣಪತಿ ಹೋಮ, ದತ್ತಹೋಮ, ಹವನ, ಪೂರ್ಣಾಹುತಿ ನೆರವೇರಿದವು. ಅನಸೂಯಾದೇವಿ, ಅತ್ರಿಮುನಿ, ಗುರುದತ್ತಾತ್ರೇಯ ಮೂರ್ತಿಗೆ ಪೂಜಾ ಕೈಂಕರ್ಯಗಳು ನೆರವೇರಿದವು. ಧಾರ್ಮಿಕ ಸಭೆ ಜರುಗಿತು. ಭಕ್ತರಿಗೆ ಪಲಾವ್‌, ಮೊಸರನ್ನ ಪ್ರಸಾದ ವಿತರಿಸಲಾಯಿತು. ಮೂರು ದಿನಗಳಿಂದ ನಡೆದ ದತ್ತ ಜಯಂತಿ ಉತ್ಸವಕ್ಕೆ ಶನಿವಾರ ತೆರೆಬಿತ್ತು.

ವ್ಯವಸ್ಥಿತ ಸೌಕರ್ಯ, ಬಿಗಿಭದ್ರತೆ
ಕಳೆದ ಬಾರಿ ಅಹಿತಕರ ಘಟನೆ ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ದತ್ತಜಯಂತಿಗೆ ವ್ಯವಸ್ಥಿತ ಸೌಕರ್ಯ, ಬಿಗಿ ಭದ್ರತೆ ಕೈಗೊಂಡಿತ್ತು. ರಸ್ತೆ, ವಾಹನ ನಿಲುಗಡೆ, ಕುಡಿಯುವ ನೀರು, ಶೌಚಾಲಯ ಸಹಿತ ಅಗತ್ಯ ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಿತ್ತು.

ಗಿರಿಶ್ರೇಣಿ ಮಾರ್ಗದಲ್ಲಿ ದ್ವಿಮುಖ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆಯನ್ನು ಸಜ್ಜುಗೊಳಿಸಿತ್ತು. ಹೀಗಾಗಿ, ‘ಟ್ರಾಫಿಕ್ ಜಾಮ್‌’ ಸಮಸ್ಯೆ ಇರಲಿಲ್ಲ.

ಭದ್ರತೆಗೆ ಪೊಲೀಸ್‌ ಸರ್ಪಗಾವಲು ನಿಯೋಜಿಸಲಾಗಿತ್ತು. ಕಳೆದ ಬಾರಿ ಅಹಿತಕರ ಘಟನೆ ನಡೆದ ಸ್ಥಳಗಳಲ್ಲಿ ಹೆಚ್ಚಿನ ನಿಗಾ, ಬಂದೋಬಸ್ತ್‌ ವಹಿಸಲಾಗಿತ್ತು. ಕಣ್ಗಾವಲಿಗೆ ಬಹಳಷ್ಟು ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ದತ್ತಪೀಠದಲ್ಲಿ ಮೊಕ್ಕಾಂ ಇದ್ದರು.

ಜಿಲ್ಲಾಡಳಿತ ವು ಶಾಂತಿಸುವ್ಯವಸ್ಥೆ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರ, ಗಿರಿಶ್ರೇಣಿ ಮಾರ್ಗದ ಗ್ರಾಮಗಳಲ್ಲಿ ಅಂಗಡಿಮುಂಗಟ್ಟುಗಳನ್ನು ತೆರೆಯದಂತೆ ನಿರ್ಬಂಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.