ADVERTISEMENT

ದತ್ತಮಾಲೆ ಧಾರಣೆ ಕೈಂಕರ್ಯ ಇಂದು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 14:00 IST
Last Updated 11 ಡಿಸೆಂಬರ್ 2018, 14:00 IST
ಯೋಗೀಶ್‌ರಾಜ್‌ ಅರಸ್‌
ಯೋಗೀಶ್‌ರಾಜ್‌ ಅರಸ್‌   

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇಗುಲದಲ್ಲಿ ಇದೇ 12ರಂದು ದತ್ತಮಾಲೆ ಧಾರಣೆ ಕೈಂಕರ್ಯ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಯೋಗೀಶ್‌ರಾಜ್‌ ಅರಸ್‌ ಇಲ್ಲಿ ಮಂಗಳವಾರ ತಿಳಿಸಿದರು.

ದೇಗುಲದಲ್ಲಿ ಬೆಳಿಗ್ಗೆ 9.30ಕ್ಕೆ ದತ್ತಹೋಮ ನೇರವೇರಲಿದೆ. ದತ್ತಭಕ್ತರು ಮಾಲೆ ಧರಿಸುವ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಇದೇ 22ರವರಗೆ ಅಭಿಯಾನ ಜರುಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

20ರಂದು ಅನಸೂಯಾದೇವಿ ಜಯಂತಿ ಜರುಗಲಿದೆ. ಅಂದು ಬೆಳಿಗ್ಗೆ 9.30ಕ್ಕೆ ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಮಹಿಳೆಯರು ಪಾಲ್ಗೊಳ್ಳುವರು. ನಂತರ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ತೆರಳುವರು. ಗಿರಿಯಲ್ಲಿ ಪಾದುಕೆ ದರ್ಶನ ಮಾಡಿ, ಅನಸೂಯಾ ದೇವಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುವರು ಎಂದರು.

ADVERTISEMENT

21ರಂದು ಶೋಭಾಯಾತ್ರೆ ನಡೆಯಲಿದೆ. ಯಾತ್ರೆಯು ಮಧ್ಯಾಹ್ನ 2.30ಕ್ಕೆ ನಗರದ ಕಾಮಧೇನು ಗಣಪತಿ ದೇಗುಲದಿಂದ ಹೊರಡಲಿದೆ. ಆಜಾದ್‌ ಪಾರ್ಕ್‌ನಲ್ಲಿ ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ವಿಶ್ವ ಹಿಂದು ಪರಿಷತ್‌ನ ವಿಶೇಷ ಸಂಪರ್ಕ ಪ್ರಮುಖ್‌ ಮಂಜುನಾಥ ಸ್ವಾಮಿ ಅವರು ದಿಕ್ಸೂಚಿ ಭಾಷಣ ಮಾಡುವರು. ಮರ್ಲೆಯ ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾಮಹಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

22ರಂದು ದತ್ತಪೀಠದಲ್ಲಿ ಗಣಪತಿ ಹೋಮ, ದತ್ತ ಹೋಮ, ಧಾರ್ಮಿಕ ಸಭೆ ನಡೆಯಲಿದೆ. ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ದತ್ತಪೀಠಕ್ಕೆ ಬರುವರು. ದತ್ತಪೀಠದಲ್ಲಿ ಪಡಿ (ಅಕ್ಕಿ, ಬೆಲ್ಲ, ತೆಂಗಿನಕಾಯಿ) ಅರ್ಪಿಸುವರು ಎಂದರು.

ದತ್ತ ಜಯಂತಿ ನಿಮಿತ್ತ ಇದೇ 12ರಿಂದ ಸುಧರ್ಮ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಗಣಪತಿ ಕಾಮಧೇನು ದೇಗುಲ ಆವರಣದಲ್ಲಿ 12ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಥಯಾತ್ರೆಗೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಚರ್ಚಿಸಿ ತಿಳಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದರು.

ಬಜರಂಗದಳದ ಜಿಲ್ಲಾ ಸಂಚಾಲಕ ತುಡುಕೂರು ಮಂಜು ಮಾತನಾಡಿ, ದತ್ತ ಜಯಂತಿಗೆ ವಿವಿಧೆಡೆಗಳಿಂದ ದತ್ತಪೀಠಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಿನಿಬಸ್‌ ಅಥವಾ ಅದಕ್ಕಿಂತ ಲಘುವಾಹನಗಳಲ್ಲೇ ಬರಬೇಕು ಎಂದು ತಿಳಿಸಲಾಗಿದೆ. ಕುಡಿಯುವ ನೀರು, ವಾಹನ ನಿಲುಗಡೆಗೆ ವ್ಯವಸ್ಥೆ ಇತ್ಯಾದಿ ಮೂಲಸೌಕರ್ಯ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ ಎಂದರು.

ವಿಶ್ವ ಹಿಂದು ಪರಿಷತ್‌ ಜಿಲ್ಲಾ ಉಪಾಧ್ಯಕ್ಷ ಪ್ರೇಂಕಿರಣ್‌, ಜಿಲ್ಲಾ ಸಹಸಂಚಾಲಕ ಸಿ.ಡಿ.ಬಜರಂಗದಳ ಸಹಸಂಯೋಜಕ ಅಮಿತ್‌, ವಿದ್ಯಾರ್ಥಿ ಪ್ರಮುಖ್‌ ಅಮಿತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.