ADVERTISEMENT

ವಿಚಾರಣೆಗೆ ಡಿಎಚ್‌ಒಗೆ ಡಿ.ಸಿ ಸೂಚನೆ

ಆಶ್ರಯ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಹೆಚ್ಚು ಹಣ ವಸೂಲಿ: ದೂರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 16:59 IST
Last Updated 18 ಸೆಪ್ಟೆಂಬರ್ 2020, 16:59 IST
ಆಸ್ಪತ್ರೆಯ ಬಿಲ್‌
ಆಸ್ಪತ್ರೆಯ ಬಿಲ್‌   

ಚಿಕ್ಕಮಗಳೂರು: ಸರ್ಕಾರವು ಕೋವಿಡ್‌ ಚಿಕಿತ್ಸೆಗೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣವನ್ನು ನಗರದ ಆಶ್ರಯ ಆಸ್ಪತ್ರೆಯಲ್ಲಿ ವಸೂಲಿ ಮಾಡಲಾಗಿದೆ ಎಂಬ ದೂರಿನ ಕುರಿತು ‌ವಿಚಾರಣೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್‌ಒ) ಸೂಚನೆ ನೀಡಿದ್ದಾರೆ.

ಕಡೂರು ತಾಲ್ಲೂಕಿನ ಪಿಳ್ಳೇನಳ್ಳಿಯ ಪಿ.ಎಸ್‌.ನಂಜುಂಡಪ್ಪ (70) ಅವರ ಚಿಕಿತ್ಸೆ, ವೆಚ್ಚಕ್ಕೆ ಸಂಬಂಧಿಸಿದಂತೆ ಬೆಂಗ ಳೂರಿನ ಎಚ್‌.ಒ.ಪ್ರಸನ್ನ ಕುಮಾರ್‌ (ಹಿರಿಯ ಸಹಾಯಕ, ಆರ್ಥಿಕ ಇಲಾಖೆ, ವಿಧಾನಸೌಧ) ಅವರು ಶುಕ್ರವಾರ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಯತೀಶ್‌ ಎಂಬವರು ಜಿಲ್ಲಾಧಿಕಾರಿಗೆ ತಲುಪಿಸಿದ್ದಾರೆ.

ದೂರಿನಲ್ಲಿ ಏನಿದೆ?: ಮಾವ (ನಂಜುಂಡಪ್ಪ) ಅವರನ್ನು ಆ. 24ರಂದು ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಮ್ಲಜನಕ ಪ್ರಮಾಣ ಕಡಿಮೆ ಇದೆ ಎಂದು ಐಸಿಯುನಲ್ಲಿ (ತೀವ್ರ ನಿಗಾ ಘಟಕಕ್ಕೆ) ದಾಖಲಿಸಿದರು. ಆ್ಯಂಟಿಜನ್‌ ವರದಿಯಲ್ಲಿ ನೆಗೆಟಿವ್‌ ಇದೆ ಎಂದು ಜನರಲ್‌ ವಾರ್ಡ್‌ಗೆ ವರ್ಗಾಯಿಸಿದರು. ಆಮ್ಲಜನಕ ಕೊರತೆ ಇದೆ ಎಂದು ಮತ್ತೆ ಐಸಿಯುಗೆ ದಾಖಲಿಸಿದರು. ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟಿದೆ ಎಂದು ಆಸ್ಪತ್ರೆಯವರು ತಿಳಿಸಿದರು. ಗುಣಪಡಿಸುವುದಾಗಿ ಭರವಸೆ ನೀಡಿ, ಬೇರೆಡೆಗೆ ಕರೆದೊಯ್ಯಲು ಬಿಡಲಿಲ್ಲ.

ADVERTISEMENT

ಇದೇ 11ರಂದು ಮಾವ ಮೃತಪಟ್ಟರು. ₹ 11 ಲಕ್ಷ ಬಿಲ್‌ (ಆಸ್ಪತ್ರೆ ಮತ್ತು ಮೆಡಿಕಲ್ ವೆಚ್ಚ) ಮಾಡಿದರು. ಬಿಲ್‌ ಪಾವತಿಸುವವರೆಗೆ ಮೃತದೇಹ ನೀಡಲಿಲ್ಲ. ಕೋವಿಡ್‌ ಚಿಕಿತ್ಸೆಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ವಸೂಲಿ ಮಾಡಿದ್ದಾರೆ ಎಂದು ಪ್ರಸನ್ನ ಕುಮಾರ್‌ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ

ಕಡೂರು ತಾಲ್ಲೂಕಿನ ಪಿಳ್ಳೇನಳ್ಳಿಯ ನಂಜುಂಡಪ್ಪ (70) ಅವರ ಕೋವಿಡ್‌ ಚಿಕಿತ್ಸಾ ವೆಚ್ಚದ ಆಶ್ರಯ ಆಸ್ಪತ್ರೆಯ ಬಿಲ್‌ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಕಮೆಂಟ್‌ಗಳು ವ್ಯಕ್ತವಾಗಿವೆ.

ಈ ಬಿಲ್‌ ‘ವಾಟ್ಸ್‌ ಆ್ಯಪ್‌ ಗ್ರೂಪ್‌’, ‘ಫೇಸ್‌ ಬುಕ್‘ನಲ್ಲಿ ಈ ಬಿಲ್‌ ಚರ್ಚೆಗೆ ‘ಅಖಾಡ ’ ಒದಗಿಸಿದೆ. ಜನರು ಹಿಗ್ಗಾಮುಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.