ಬೀರೂರು(ಕಡೂರು): ಕುರುಬ ಸಮುದಾಯದ ಆಚರಣೆಗಳು, ಇತಿಹಾಸ ಕುರಿತು ಪುಸ್ತಕ ಹೊರತಂದಿರುವ ಬೀರೂರಿನ ಡಿ.ಇಸ್ಮಾಯಿಲ್ ಅವರ ಅಧ್ಯಯನಶೀಲತೆ ನಿಜಕ್ಕೂ ಶ್ಲಾಘನೀಯ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಬಣ್ಣಿಸಿದರು.
ಪಟ್ಟಣದ ಪತ್ರೆ.ಕೆ.ಚನ್ನವೀರಪ್ಪಯ್ಯ ರೋಟರಿ ಭವನದ ಮಾರ್ಗದ ಮಲ್ಲಪ್ಪ ಹಾಲ್‌ನಲ್ಲಿ ಶನಿವಾರ ಶಾಸನ ಸಂಶೋಧಕ ಡಿ.ಇಸ್ಮಾಯಿಲ್ ಅವರಿಗೆ ಆಸಂದಿ ಮಠದ ರೇವಣ ಸಿದ್ದೇಶ್ವರ ಸಂಸ್ಥಾನ ಮತ್ತು ಕುರುಬ ಸಮುದಾಯದ ವತಿಯಿಂದ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಶಾಸನಗಳ ಪ್ರಕಾರವೇ ಕುರುಬ ಸಮುದಾಯಕ್ಕೆ 1,200 ವರ್ಷಗಳ ಇತಿಹಾಸವಿದೆ. ಅನ್ಯ ಧರ್ಮದವರಾದರೂ ಇಸ್ಮಾಯಿಲ್ ಅವರು, ನಮ್ಮ ಸಮುದಾಯದ ಕುರಿತು ಅಧ್ಯಯನ ನಡೆಸಿ, ಕುರುಬ ಸಮುದಾಯದ ಗೊಲಗಳು, ಕುಲ ಗುರುಗಳ ಬಗ್ಗೆ ಗ್ರಂಥ ರಚಿಸಿರುವುದು ಸಮಾಜಕ್ಕೆ ಮಾರ್ಗದರ್ಶಕರಂತೆ ನಡೆದಿರುವುದು ಅಭಿನಂದನೀಯ. ಅವರಿಗೆ ನಮ್ಮ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುವ ಜತೆಗೆ ಅವರು ಸಂಶೋಧಿಸಿ ಹೊರತಂದಿರುವ ‘ಮಧ್ಯ ಕರ್ನಾಟಕದಲ್ಲಿ ಬೀರದೇವರು’ ಪುಸ್ತಕಗಳನ್ನು ಖರೀದಿಸಿ, ಯುವಜನರಿಗೆ ವಿತರಿಸಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು. ಇದು ನಮ್ಮ ಕರ್ತವ್ಯವಾಗಿದ್ದು, ಅ. 5ರಂದು ಕಡೂರಿನಲ್ಲಿ ನಡೆಯಲಿರುವ ಕುರುಬ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಸ್ಮಾಯಿಲ್ ಅವರ 30 ವರ್ಷಗಳ ಪರಿಶ್ರಮದ ಫಲ ಈ ಪುಸ್ತಕವಾಗಿದೆ. ಜಾತ್ರೆಗಳು, ದೇವಾಲಯಗಳು, ಗುಡಿಗೌಡರನ್ನು ಸಂದರ್ಶಿಸಿ, ಶಾಸನಗಳನ್ನು ಅಧ್ಯಯನ ಮಾಡಿ ರಚಿಸಿರುವ ಪುಸ್ತಕವು ಕುರುಬ ಸಮುದಾಯಕ್ಕೆ ಆಸ್ತಿಯಾಗಿ ಉಳಿಯಲಿದೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಡಿ.ಇಸ್ಮಾಯಿಲ್, ‘ಗ್ರಂಥ ಹೊರತಂದಿದ್ದೇನೆ, ಜನರು ಅದನ್ನು ಓದಿ ಅದರಲ್ಲಿ ನಮೂದಿಸಿರುವ ವಿವರಗಳು, ಆಚರಣೆಗಳು ಸರಿಯಾಗಿದೆಯೇ ಎಂದು ತಿಳಿಸಿದರೆ ಅದೇ ನನಗೆ ಪ್ರಶಸ್ತಿ, ತಪ್ಪಿದ್ದರೆ ತಿಳಿಸಿ, ಅದನ್ನು ಸರಿಪಡಿಸೋಣ’ ಎಂದರು.
ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಆಸಂದಿ ರೇವಣಸಿದ್ದೇಶ್ವರ ಸಂಸ್ಥಾನದ ಅಧ್ಯಕ್ಷ ರೇವಣ್ಣ ಮಾತನಾಡಿ, ಕುರುಬ ಸಮಾಜದ ಸಂಘಟನೆಗೆ ಒಂದು ರೀತಿಯಲ್ಲಿ ಈ ಪುಸ್ತಕ ಹಾಗೂ ಇಸ್ಮಾಯಿಲ್ ಅವರು ಕಾರಣೀಭೂತರಾಗಿದ್ದಾರೆ ಎಂದರು.
ಬೀರೂರು ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮಾಜಿ ಅಧ್ಯಕ್ಷ ಹಾಲಪ್ಪ, ಯರದಕೆರೆ ರಾಜಪ್ಪ, ಅಜ್ಜಯ್ಯ ಒಡೆಯರ್, ದೇವರಾಜ್, ಚೇತನ್, ಮುದಿಯಪ್ಪ, ಬಿ.ಪಿ.ನಾಗರಾಜ್, ವಿನಾಯಕ್ ನಂಜುಂಡಪ್ಪ, ಉಮೇಶ್, ಸಂತೋಷ್ ಕುಮಾರ್, ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.