ಚಿಕ್ಕಮಗಳೂರು: ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಸರಿಪಡಿಸಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ವಸಂತಕುಮಾರ್ ಮಾತನಾಡಿ, ‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳು ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಾಭಾವಿಕ ಮರಣ, ಮದುವೆ ಧನಸಹಾಯ, ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಕಲ್ಯಾಣ ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.
ಕಾರ್ಮಿಕರಲ್ಲದವರು ನೋಂದಣಿ ಮಾಡಿಸಿದ್ದಾರೆ ಎಂಬ ಕಾರಣಕ್ಕೆ ನೈಜ ಕಾರ್ಮಿಕರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಕಾರ್ಮಿಕರಲ್ಲದ ವ್ಯಕ್ತಿಗಳನ್ನು ಪಟ್ಟಿಯಿಂದ ಬಿಟ್ಟು ಉಳಿದ ಕಾರ್ಮಿಕರಿಗೆ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಕೆಲಸಕ್ಕೆ ಬಾರದ ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಾರ್ಮಿಕ ಮಂಡಳಿ ವಿತರಿಸಿ ಮೂಲಕ ದ್ರೋಹ ಎಸಗುತ್ತಿದೆ. ಕಾರ್ಮಿಕರ ನಿವೃತ್ತಿ ನಂತರ ಔಷಧ ಹಾಗೂ ಜೀನೋಪಾಯಕ್ಕೆ ಪಿಂಚಣಿ ನೀಡುತ್ತಿಲ್ಲ. ಇದರಿಂದ ನಿವೃತ್ತ ಕಾರ್ಮಿಕರು ಬದುಕು ದುಸ್ಥಿತಿಗೆ ತಲುಪಿದೆ. ಮಕ್ಕಳ ಮದುವೆಗೆ ಧನ ಸಹಾಯದ ಹಣ ನೀಡದೆ ಸತಾಯಿಸುತ್ತಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಸದಸ್ಯರಾದ ಜಾನಕಿ, ಜಯಕುಮಾರ್, ಮಂಜುನಾಥ್, ಗೌರಮ್ಮ, ದಯಾಕ್ಷಿ, ಶ್ರೀಧರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.