ADVERTISEMENT

ಮತ್ತೆ ಮುನ್ನೆಲೆಗೆ ಮುತ್ತೂಡಿ–ಎನ್.ಆರ್.ಪುರ ರಸ್ತೆ ಮರು ನಿರ್ಮಾಣ ಯೋಜನೆ

ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆ: ಸ್ಥಳೀಯರಿಂದ ಹೆಚ್ಚಿದ ಒತ್ತಡ

ವಿಜಯಕುಮಾರ್ ಎಸ್.ಕೆ.
Published 1 ಸೆಪ್ಟೆಂಬರ್ 2024, 6:57 IST
Last Updated 1 ಸೆಪ್ಟೆಂಬರ್ 2024, 6:57 IST
ಭದ್ರಾ ಅಭಯಾರಣದಲ್ಲಿರುವ ಮುತ್ತೋಡಿ ರಸ್ತೆ
ಭದ್ರಾ ಅಭಯಾರಣದಲ್ಲಿರುವ ಮುತ್ತೋಡಿ ರಸ್ತೆ   

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ಮುತ್ತೋಡಿ– ಕೂಸಗಲ್–ಎನ್.ಆರ್.ಪುರ ರಸ್ತೆ ಮರು ನಿರ್ಮಾಣದ ಯೋಜನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಯೋಜನೆ ಸಾಧಕ–ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಭದ್ರಾ ಜಲಾಶಯ ನಿರ್ಮಾಣವಾದ ನಂತರ ಕೂಸಗಲ್ ಮತ್ತು ಮುತ್ತೋಡಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಜಲಾಶಯದ ಹಿನ್ನೀರಿನಲ್ಲಿ ರಸ್ತೆ ಮುಳುಗಡೆಯಾಗಿದೆ. ಚಿಕ್ಕಮಗಳೂರು–ಎನ್.ಆರ್.ಪುರಕ್ಕೆ ಇದ್ದ ನೇರ ಮಾರ್ಗ ಇದರಿಂದ ಮುಚ್ಚಿ ಹೋದಂತೆ ಆಗಿದೆ. ಈ ರಸ್ತೆಯಲ್ಲಿ  ಚಿಕ್ಕಮಗಳೂರಿನಿಂದ ಎನ್.ಆರ್.ಪುರ ತಲುಪಲು 55 ಕಿಲೋ ಮೀಟರ್ ಮಾತ್ರ ಕ್ರಮಿಸಬೇಕಿತ್ತು.

ಈಗ ಬಾಳೆಹೊನ್ನೂರು ಮಾರ್ಗ ಅಥವಾ ತರೀಕೆರೆ ಮಾರ್ಗದಲ್ಲಿ ಸಂಚರಿಸಬೇಕಿದ್ದು, ಕನಿಷ್ಠ 97 ಕಿಲೋ ಮೀಟರ್ ಸುತ್ತಬೇಕಿದೆ. ಮುತ್ತೋಡಿಯಿಂದ- ಕೂಸಗಲ್ ತನಕ ಬದಲಿ ರಸ್ತೆ ನಿರ್ಮಿಸಲು ಯೋಚಿಸಲಾಗಿತ್ತಾದರೂ ಭದ್ರಾ ಅಭಯಾರಣ್ಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಯೋಜನೆ ಸ್ಥಗಿತವಾಯಿತು. 2000-2002ರಲ್ಲಿ ಅಭಯಾರಣ್ಯದೊಳಗಿದ್ದ 13 ಹಳ್ಳಿಗಳ 700 ಕುಟುಂಬಗಳನ್ನು ಸ್ಥಳಾಂತರ ಮಾಡಲಾಯಿತು. ಇದಾದ ಬಳಿಕ ಬದಲಿ ರಸ್ತೆ ಪ್ರಸ್ತಾಪವೂ ನನೆಗುದಿಗೆ ಬಿದ್ದಿತು. ಕೂಸಗಲ್ ಬಳಿ ಸೇತುವೆ ನಿರ್ಮಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ. 

ADVERTISEMENT

ಎನ್.ಆರ್.ಪುರದಿಂದ ಕೂಸಲಗ್‌ ತನಕ ಈಗಾಗಲೇ ರಸ್ತೆ ಇದ್ದು, ಜನ ಸಂಚಾರವೂ ಇದೆ. ಅಲ್ಲಿಂದ ಮುಂದಕ್ಕೆ ಸೇತುವೆ ನಿರ್ಮಿಸಿದರೆ ತೇಗದಗುಡ್ಡ, ಕುರುಕಲು ಮನೆ, ದಬ್ಬಗಾರು, ಹೆಗ್ಗಾರ್ ಮುತ್ತುವಾನೆ, ಕೋದಿ, ಹಿತ್ತಲ ಕೊಂಕನಮನೆ, ಶಿರವಾಸೆ, ಮುತ್ತೊಡಿ, ಜೋಳದಾಳ ಮಾರ್ಗವಾಗಿ ಚಿಕ್ಕಮಗಳೂರು ತಲುಪಬಹುದು ಎನ್ನುವುದು ಅಲ್ಲಿನ ಜನರ ಅಭಿಪ್ರಾಯ.

ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಕೆಯಾಗಿದೆ. ರಸ್ತೆ ನಿರ್ಮಾಣ ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅರಣ್ಯ ಇಲಾಖೆಗೂ ಪತ್ರ ರವಾನೆಯಾಗಿದ್ದು, ಯಾವ ಮಾರ್ಗ ಎಂಬುದನ್ನು ಸಮರ್ಪಕವಾಗಿ ನಮೂದಿಸುವಂತೆ ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದಿರಾ ಗಾಂಧಿ ಕಾಲದಲ್ಲೇ ಹಣ ನಿಗದಿ
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಇಂದಿರಾ ಗಾಂಧಿ ಅವರಿಗೂ ಸ್ಥಳೀಯರು ಈ ರಸ್ತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದರು. ಬಳಿಕ 1978–79ರಲ್ಲೇ ₹33.70 ಲಕ್ಷ ಅನುದಾನ ಬಿಡುಗೆಯಾಗಿತ್ತು. ಈ ಪೈಕಿ ₹22.50 ಲಕ್ಷದಲ್ಲಿ ಎನ್.ಆರ್.ಪುರದಿಂದ ಕೂಸಗಲ್ ತನಕ ರಸ್ತೆ ನಿರ್ಮಾಣವಾಗಿತ್ತು ಎಂದು ಸ್ಥಳೀಯ ಮುಖಂಡ ಕೃಷ್ಣಯ್ಯ ನೆನಪಿಸಿಕೊಳ್ಳುತ್ತಾರೆ. ಅಭಯಾರಣ್ಯದ ವ್ಯಾಪ್ತಿಗೆ ಈ ರಸ್ತೆ ಸೇರಿದ್ದರಿಂದ ಅನುದಾನ ಹಿಂದಕ್ಕೆ ಹೋಗಿದೆ. ಈ ಮೊದಲೇ ಇದ್ದ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ರಾಜ್ಯದ ಬಂಡಿಪುರ ಸೇರಿ ಬೇರೆ ಬೇರೆ ಅಭಯಾರಣ್ಯಗಳಲ್ಲಿ ಅವಕಾಶ ಇದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ರಸ್ತೆಯನ್ನೂ ಅಭಿವೃದ್ಧಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ವೈಲ್ಡ್ ಕ್ಯಾಟ್–ಸಿ ವಿರೋಧ
ಭದ್ರಾ ಅಭಯಾರಣ್ಯದಲ್ಲಿ ಹಾದು ಹೋಗುವ ಈ ರಸ್ತೆ ಅಭಿವೃದ್ಧಿಗೆ ವನ್ಯಜೀವಿ ಸಂರಕ್ಷಣಾ ಕ್ರಿಯಾತಂಡ (ವೈಲ್ಟ್‌ ಕ್ಯಾಟ್–ಸಿ) ವಿರೋಧ ವ್ಯಕ್ತಪಡಿಸಿದೆ. ಒಟ್ಟು 500 ಚದರ ಕಿಲೋ ಮೀಟರ್ ವಿಸ್ತಾರದ ಈ ಅಭಯಾರಣ್ಯವನ್ನು 1998ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಹುಲಿ ಚಿರತೆ ಆನೆ ಕರಡಿ ಜಿಂಕೆ ಸೇರಿದಂತೆ ಪ್ರಾಣಿ-ಪಕ್ಷಿಗಳ ಸಂತತಿ ಇದೆ ಪರಿಸರವಾದಿಗಳಾದ ಡಿ.ವಿ.ಗಿರೀಶ್ ಸ.ಗಿರಿಜಾಶಂಕರ ಶ್ರೀದೇವ್ ಹುಲಿಕೆರೆ ಹೇಳಿದ್ದಾರೆ. 2008ರಲ್ಲಿ ಈ ಅಭಯಾರಣ್ಯವನ್ನು ಅತ್ಯಂತ ಜಟಿಲ ಹುಲಿ ಅವಾಸ ಸ್ಥಾನ ಎಂದು ಘೋಷಿಸಲಾಗಿದೆ. ಜತೆಗೆ ವರ್ಷಪೂರ್ತಿ ಅಭಯಾರಣ್ಯದ ಪ್ರಾಣಿ ಸಂಕುಲಕ್ಕೆ ನೀರುಣಿಸುವ ಜತೆಗೆ ಭದ್ರಾ ನದಿಗೆ ಜೀವಸೆಲೆಯಂತಿರುವ ಉಪ ನದಿಗಳಾದ ತಡಬೇಹಳ್ಳ ಹೆಬ್ಬೇಹಳ್ಳ ಹಾಗೂ ಸೋಮವಾಹಿನಿ ನದಿಗಳು ಸಹ ಇವೆ. ಇಂತಹ ಪ್ರದೇಶದಲ್ಲಿ ಮತ್ತೆ ಸಾರಿಗೆ ಸಂಪರ್ಕಕ್ಕೆ ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ. ರಸ್ತೆ ಅಭಿವೃದ್ಧಿಯಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.