ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗೆ ₹200 ಕೋಟಿ ಮೀಸಲಿಡಲು ಒತ್ತಾಯ: ಮೇಘ ಮಲ್ನಾಡ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:08 IST
Last Updated 19 ಫೆಬ್ರುವರಿ 2026, 3:08 IST
<div class="paragraphs"><p>ಮೇಘ ಮಲ್ನಾಡ್</p></div>

ಮೇಘ ಮಲ್ನಾಡ್

   

ಚಿಕ್ಕಮಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಘೋಷಿಸಿದ ₹200 ಕೋಟಿಯನ್ನು ತಕ್ಷಣ ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ಹೋರಾಟಗಾರ ಮೇಘ ಮಲ್ನಾಡ್ ಒತ್ತಾಯಿಸಿದರು.

ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ ₹200 ಕೋಟಿಯನ್ನು ಮೀಸಲಿಡುವುದಾಗಿ ಘೋಷಿಸಿತ್ತು. ವಾಗ್ದಾನ ಮಾಡಿದ ಸರ್ಕಾರ, ಈಗ ತನ್ನ ಮಾತು ಉಳಿಸಿಕೊಳ್ಳುವ ಹೊಣೆಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘2026ರ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ಮತ್ತು ಕಡ್ಡಾಯವಾಗಿ ಅನುದಾನ ಘೋಷಿಸಲೇಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಪ್ರಮುಖ ಹಕ್ಕೊತ್ತಾಯಗಳೆಂದರೆ‌ ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಬೇಕು. ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ ₹250 ಕೋಟಿಗಳ ಪ್ರತ್ಯೇಕ ಬಜೆಟ್ ನೀಡಬೇಕು’ ಎಂದರು‌.

ವಸತಿ, ಹಾಸ್ಟೆಲ್ ಮತ್ತು ಶಾರ್ಟ್ ಸ್ಟೇ ಹೋಮ್‌ಗಳನ್ನು ತಕ್ಷಣ ಒದಗಿಸಬೇಕು. ಪ್ರತಿವರ್ಷ ಕನಿಷ್ಠ 500 ಮನೆಗಳನ್ನು ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿ ವ್ಯಕ್ತಿಗೆ 2 ಎಕರೆ ಕೃಷಿಯೋಗ್ಯ ಭೂಮಿ ನೀಡಬೇಕು ಎಂದು ಆಗ್ರಹಿಸಿದರು.

ಉದ್ಯಮಶೀಲತೆಗೆ ಬ್ಯಾಂಕ್-ಲಿಂಕ್ ಆಧಾರಿತ ಯೋಜನೆ ಜಾರಿಗೆ ತಂದು ಪ್ರತಿ ವ್ಯಕ್ತಿಗೆ ₹2 ಲಕ್ಷ ಸಬ್ಸಿಡಿ ನೀಡಬೇಕು. ಸ್ವಸಹಾಯ ಗುಂಪುಗಳನ್ನು ರಚಿಸಲು ಮತ್ತು ಬಲಪಡಿಸಲು ಸಮುದಾಯ, ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಬಡ್ಡಿ ರಹಿತ ಸಾಲಗಳನ್ನು ಒದಗಿಸಬೇಕು. ಮೈತ್ರಿ ಪಿಂಚಣಿಯನ್ನು ತಿಂಗಳಿಗೆ ₹2,000ಕ್ಕೆ ಹೆಚ್ಚಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ತಿಂಗಳಿಗೆ ₹5,000 ವೃದ್ಧಾಪ್ಯ ಪಿಂಚಣಿ ನೀಡಬೇಕು. ಶೇ 1ರಷ್ಟು ಮೀಸಲಾತಿ ಕೇವಲ ಘೋಷಣೆಯಾಗಿ ಉಳಿಸದೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಜಾರಿಗೊಳಿಸಬೇಕು. ಶಸ್ತ್ರಚಿಕಿತ್ಸೆಯ ನಂತರ ಕನಿಷ್ಠ 6 ತಿಂಗಳು ಪ್ರತಿ ತಿಂಗಳು ₹5,000 ಪುನರ್ವಸತಿ ನೆರವು ನೀಡಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಕನಿಷ್ಠ 1 ವಿಶೇಷ ಆರೋಗ್ಯ ಕೇಂದ್ರ ತೆರೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ ಸದಸ್ಯರಾದ ಫಾತಿಮತ್, ಕಮಲಿ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.