ಆಲ್ದೂರು: ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಭಾಗಕ್ಕೆ ಗಜಕಂಟಕ ಎದುರಾಗುತ್ತಿದ್ದು, ಕಾಡಾನೆಗಳು ಗುಂಪು ಗುಂಪಾಗಿ ನಾಡಿಗೆ ಬರುತ್ತಿರುವುದು ನಿರಂತರವಾಗಿದೆ.
ಈಚೆಗೆ ಅರಣ್ಯ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಿ ಉಪಟಳ ನೀಡುತ್ತಿದ್ದ ಗಂಡು ಕಾಡಾನೆಯೊಂದನ್ನು ಹಾಂದಿ ಬಳಿ ಸೆರೆ ಹಿಡಿಯಲಾಗಿತ್ತು. ಈಗ ಮತ್ತೊಂದು ಕಾಡಾನೆಯು ಆಲ್ದೂರು ಮತ್ತು ಆವತಿ ಹೋಬಳಿಗಳ ಗ್ರಾಮಗಳಾದ ಸತ್ತಿಹಳ್ಳಿ ಯಲಗುಡಿಗೆ ಹೊಸಪೇಟೆ, ಚಂಡಗೋಡು, ಬೆಳಗೋಡು, ಅರೇನೂರು, ಹಕ್ಕಿಮಕ್ಕಿ, ಐದಳ್ಳಿ, ಬೆಟ್ಟದಹಳ್ಳಿ, ಕೆಳಗೂರು, ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ತೋಟಗಳನ್ನು ಹಾಳು ಮಾಡಿ ಬೆಳೆಗಳಿಗೂ ಹಾನಿ ಉಂಟು ಮಾಡುತ್ತಿದೆ.
‘ಕಾಡಾನೆಗಳಿಂದ ಈ ಭಾಗದಲ್ಲಿ ಜೀವ ಹಾನಿ, ತೋಟಗಳಲ್ಲಿ ಕಾಫಿ, ಅಡಿಕೆ ,ಬಾಳೆ, ತೆಂಗು, ಮುಂತಾದ ಬೆಳೆಗಳು ಹಾನಿಯಾಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು, ಸಚಿವರು ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಫಿ ಬೆಳೆಗಾರರೆಲ್ಲರೂ ಒಟ್ಟುಗೂಡಿ ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆಲ್ದೂರು ಕಾಂಗ್ರೆಸ್ ಅಲ್ಪಸಂಖ್ಯಾತರ ಬ್ಲಾಕ್ ಅಧ್ಯಕ್ಷ ಅಶ್ರಫ್ ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಹರೀಶ್, ಗಜ ಕ್ರಿಯಾಪಡೆ, ಅರಣ್ಯ ಸಿಬ್ಬಂದಿಮತ್ತು ಅಧಿಕಾರಿಗಳ ತಂಡ ಪ್ರಸ್ತುತ ಉಪಟಳ ನೀಡುತ್ತಿರುವ ಕಾಡಾನೆಯ ಚಲನ–ವಲನಗಳ ಮೇಲೆ ನಿಗಾ ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಡ್ರೋನ್, ರೇಡಿಯೊ ಕಾಲರ್, ರೀತಿಯ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಆನೆಯನ್ನು ಸಮೀಪದ ಅರಣ್ಯಕ್ಕೆ ಓಡಿಸುವ ಪ್ರಯತ್ನ ನಡೆಸಲಾಗುವುದು. ಓಡಿಸುವ ಪ್ರಯತ್ನ ವಿಫಲವಾದರೆ ಅವುಗಳ ಸೆರೆ ಕಾರ್ಯಾಚರಣೆ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಬೆಳೆ ನಷ್ಟವಾದ ರೈತರು ತಮ್ಮ ಜಮೀನಿನ ಸೂಕ್ತ ದಾಖಲೆಗಳನ್ನು ಹಾನಿಯಾದ ಛಾಯಾಚಿತ್ರವನ್ನು ಕಚೇರಿಗೆ ಒದಗಿಸಿದರೆ, ಇಲಾಖೆ ವತಿಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.