ADVERTISEMENT

ಕಳಸ: ಮಾದಕ ವಸ್ತು, ಅಕ್ರಮ ವಾಸ ತಡೆಯಲು ಆಗ್ರಹ

ಸರ್ವ ಪಕ್ಷಗಳ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 12:54 IST
Last Updated 18 ಜೂನ್ 2025, 12:54 IST
ಕಳಸದಲ್ಲಿ ಮಾದಕ ವಸ್ತು ಮಾರಾಟ ಮತ್ತು ಅಪರಿಚಿತರ ವಾಸದ ಬಗ್ಗೆ ಬುಧವಾರ ಸಭೆ ನಡೆಯಿತು
ಕಳಸದಲ್ಲಿ ಮಾದಕ ವಸ್ತು ಮಾರಾಟ ಮತ್ತು ಅಪರಿಚಿತರ ವಾಸದ ಬಗ್ಗೆ ಬುಧವಾರ ಸಭೆ ನಡೆಯಿತು   

ಕಳಸ: ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ಅಪರಿಚಿತರು ಅಕ್ರಮವಾಗಿ ನೆಲೆಸಿ ಶಾಂತಿ ಭಂಗ ಮಾಡುತ್ತಿರುವುದನ್ನು ತಡೆಯುವಂತೆ ಸರ್ವ ಪಕ್ಷಗಳು ಆಗ್ರಹಿಸಿವೆ.

ಕೆಸಿಎ ಬ್ಯಾಂಕ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ‘ಕಳಸ ಸಮೀಪದ ಕಾಫಿ ತೋಟವೊಂದರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ಸುಮಾರು 50 ಭದ್ರತಾ ಸಿಬ್ಬಂದಿ ಇದ್ದು, ಆಸುಪಾಸಿನ ತೋಟಗಳ ಕೃಷಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇವರ ದಾಂದಲೆಯಿಂದಾಗಿ ಜನರು ಗೌರವಯುತವಾಗಿ ಬಾಳುವುದು ಕಷ್ಟವಾಗಿದೆ. ಇವರ ಹಿನ್ನೆಲೆ ತಿಳಿದುಕೊಂಡು ಪೊಲೀಸ್ ಇಲಾಖೆ ಅಗತ್ಯಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಶೇಷಗಿರಿ ಮಾತನಾಡಿ, ‘ಕಳಸದಲ್ಲಿ ಮಾದಕ ವಸ್ತುಗಳ ಹಾವಳಿಯಿಂದಾಗಿ ಯುವಜನರು, ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ಎರಡು ಕೊಲೆಗಳಲ್ಲಿ ಕಳಸದ ಆರೋಪಿಗಳು ಮತ್ತು ಕಳಸದ ಹಿನ್ನೆಲೆ ಬಗ್ಗೆ ಚರ್ಚೆ ನಡೆಯುತ್ತಿದೆ. ಶಾಂತಿಯುತ ಜೀವನಕ್ಕೆ ಹೆಸರಾಗಿದ್ದ ಕಳಸಕ್ಕೆ ಇಂತಹ ಸಂಪರ್ಕ ಎಲ್ಲಿಂದ ಬಂತು ಎಂಬ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮಾದಕ ವಸ್ತುಗಳ ಮಾರಾಟ ಗ್ರಾಮೀಣ ಪ್ರದೇಶದಲ್ಲೂ ಎಗ್ಗಿಲ್ಲದೆ ಸಾಗಿದ್ದು, ನಮ್ಮ ಮಕ್ಕಳು ಹಾದಿ ತಪ್ಪುವ ಅಪಾಯ ಇದೆ ಎಂದು ಪಂಚಾಯಿತಿ ಸದಸ್ಯ ರಂಗನಾಥ್ ಆತಂಕ ಹೊರಹಾಕಿದರು.

ಜೆಡಿಎಸ್ ಅಧ್ಯಕ್ಷ ಸಂತೋಷ್ ಮಾತನಾಡಿ, ಹೊರಗಿನಿಂದ ಬಂದು ಇಲ್ಲಿ ತೋಟ ಖರೀದಿ ಮಾಡಿದ ನಂತರ ಅಕ್ಕಪಕ್ಕದವರು ಕೂಡ ತೋಟ ಅವರಿಗೆ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಬೇನಾಮಿ ಆಸ್ತಿ ಖರೀದಿದಾರರ ಬಗೆ ಎಚ್ಚರ ವಹಿಸಬೇಕು ಎಂದರು.

ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ಕಳಸ ಸಮೀಪದ ತೋಟ ವಶಪಡಿಸಿಕೊಂಡ ಖಾಸಗಿ ವ್ಯಕ್ತಿಗಳು ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಹೊರಗೆ ಅಟ್ಟಿದ ಬಗ್ಗೆ ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕಳಸದಲ್ಲಿ ಶಾಂತಿ ಸಭೆ ನಡೆಸಿ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಮತ್ತು ಅಪರಿಚಿತ ವ್ಯಕ್ತಿಗಳ ಅಕ್ರಮ ವಾಸದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸೂಕ್ತ ಕ್ರಮ ವಹಿಸಬೇಕು ಎಂದು ಅವರನ್ನು ಚಿಕ್ಕಮಗಳೂರಿಗೆ ಭೇಟಿ ನೀಡಿ ಒತ್ತಾಯಿಸಲು ಸಭೆ ತೀರ್ಮಾನಿಸಿತು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್, ಸದಸ್ಯ ವೀರೇಂದ್ರ, ವಿವಿಧ ಸಂಘಟನೆಗಳ ಮುಖಂಡರಾದ ರವಿ ರೈ, ಅನಿಲ್ ಡಿಸೋಜ, ಬ್ರಹ್ಮದೇವ, ಪದ್ಮಕುಮಾರ್, ಕೆ.ಸಿ.ಧರಣೇಂದ್ರ, ನಾಗೇಶ್, ಆಶಾಲತಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.