ADVERTISEMENT

ಚಿಕ್ಕಮಗಳೂರು | ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ಇಳಿಮುಖ

ಸದ್ಯ 15 ಸಕ್ರಿಯ ಪ್ರಕರಣ: ಲಾರ್ವ ಸಮೀಕ್ಷೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 6:58 IST
Last Updated 1 ಆಗಸ್ಟ್ 2024, 6:58 IST
ಕಡೂರು ತಾಲ್ಲೂಕಿನ ಮತ್ತಿಘಟ್ಟ ವ್ಯಾಪ್ರಿಯ ಲಕ್ಕೇನಹಳ್ಳಿ ಗ್ರಾಮದ ಮನೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವ ಸಮೀಕ್ಷೆ ನಡೆಸಿದರು
ಕಡೂರು ತಾಲ್ಲೂಕಿನ ಮತ್ತಿಘಟ್ಟ ವ್ಯಾಪ್ರಿಯ ಲಕ್ಕೇನಹಳ್ಳಿ ಗ್ರಾಮದ ಮನೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವ ಸಮೀಕ್ಷೆ ನಡೆಸಿದರು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಐದಾರು ತಿಂಗಳಿನಿಂದ 650ರ ಗಡಿ ದಾಟಿ ಅಬ್ಬರಿಸಿ ತಲ್ಲಣ ಸೃಷ್ಟಿಸಿದ್ದ ಡೆಂಗಿ ಜ್ವರ ಪ್ರಕರಣ ಸದ್ಯ ಇಳಿಮುಖವಾಗುತ್ತಿದ್ದು, ಜನ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಡೆಂಗಿ ಪ್ರಕರಣಗಳು ದಾಖಲಾಗಿ ಚಿಕ್ಕಮಗಳೂರು ಕುಖ್ಯಾತಿ ಪಡೆದಿತ್ತು. ಈಗ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ನಿರಂತರ ಜಾಗೃತಿ ಹಾಗೂ ಮನೆ, ಮನೆ ಸಮೀಕ್ಷೆ ಪರಿಣಾಮ ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ಕಡಿಮೆಯಾಗಿವೆ. ಸದ್ಯ 15 ಸಕ್ರಿಯ ಪ್ರಕರಣಗಳಷ್ಟೇ ಇವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಮುಂಗಾರು ಪೂರ್ವದಲ್ಲಿ ಬಿಟ್ಟು ಬಿಟ್ಟು ಮಳೆ, ಬಿಸಿಲು ಬಂದ ಕಾರಣ ನೀರು, ತ್ಯಾಜ್ಯ ಸಂಗ್ರಹ ತಾಣಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸೊಳ್ಳೆ ಕಡಿತದಿಂದ ಇದ್ದಕ್ಕಿದ್ದಂತೆ ವಿಪರೀತ ಜ್ವರ, ತಲೆನೋವು, ಕೈಕಾಲುಗಳಲ್ಲಿ ಕೀಲು ನೋವು ಕಾಣಿಸಿಕೊಂಡಿತ್ತು. ಈಗ ನಿರಂತರ ಮಳೆಯ ಕಾರಣದಿಂದ ಸೊಳ್ಳೆಗಳ ಸಂತಾನ ಅಭಿವೃದ್ಧಿ ಇಲ್ಲವಾಗಿದೆ. ಇದರಿಂದ ಡೆಂಗಿ ಸಕ್ರಿಯ ಪ್ರಕರಣಗಳೂ ಕಡಿಮೆಯಾಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಕಳೆದ ಜನವರಿಯಿಂದ ಜುಲೈ ತನಕ ಡೆಂಗಿ ಲಕ್ಷಣ ಇರುವ ಒಟ್ಟು 5,435 ಜನರನ್ನು ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಿದೆ. ಈ ಪೈಕಿ 663 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಚಿಕಿತ್ಸೆ ಪಡೆದ ಬಳಿಕ 648 ಮಂದಿ ಗುಣಮುಖರಾಗಿದ್ದು, 15 ಸಕ್ರಿಯ ಪ್ರಕರಣಗಳು ಇವೆ. ಮೇ, ಜೂನ್‌, ಜುಲೈನಲ್ಲಿಯೇ ಅತಿ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬಂದಿದ್ದವು.

ಆರಂಭದ ಜನವರಿಯಲ್ಲಿ 6 ಡೆಂಗಿ ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಆದಾದ ಬಳಿಕ ನಿರಂತರವಾಗಿ ಏರಿಕೆಯಾಗಿ ಏಪ್ರಿಲ್‌ನಲ್ಲಿ 33, ಮೇನಲ್ಲಿ 120, ಜೂನ್‌ನಲ್ಲಿ 319, ಹಾಗೂ ಜುಲೈನಲ್ಲಿ 154 ಪ್ರಕರಣಗಳು ದೃಢಪಟ್ಟು ಜನರನ್ನು ಕಂಗೆಡುವಂತೆ ಮಾಡಿತ್ತು.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಅತಿಹೆಚ್ಚು 431 ಡೆಂಗಿ ಪ್ರಕರಣಗಳು, ಕಡೂರು 69, ತರೀಕೆರೆ 54, ಕಳಸ ಮತ್ತು ಶೃಂಗೇರಿಯಲ್ಲಿ ತಲಾ 26 ಹಾಗೂ ಕೊಪ್ಪದಲ್ಲಿ 30 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. ಸದ್ಯ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಬಹುತೇಕ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ರಾಜ್ಯದ ಡೆಂಗಿ ಪ್ರಕರಣಗಳ ಪಟ್ಟಿಯಲ್ಲಿ ಜಿಲ್ಲೆಯು ನಾಲ್ಕನೇ ಸ್ಥಾನಕ್ಕೆ ಇಳಿದಿದೆ.

ಮಳೆಗಾಲ ಆರಂಭವಾಗಿದ್ದು ಮಲೇರಿಯಾ, ವಿಷಮಶೀತ ಜ್ವರ, ಇಲಿಜ್ವರ ಸೇರಿ ಹಲವು ವಿವಿಧ ರೋಗಗಳು ಆವರಿಸುವ ಆತಂಕವಿದೆ. ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆರೋಗ್ಯ ಇಲಾಖೆ ನಿರಂತರವಾಗಿ ಲಾರ್ವ ಸಮೀಕ್ಷೆ ಕೈಗೊಂಡು ಜಾಗೃತಿ ಮೂಡಿಸುತ್ತಿದೆ. ಪರಿಣಾಮ ಡೆಂಗಿ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಜ್ವರದ ಲಕ್ಷಣ ಕಂಡು ಬಂದಲ್ಲಿ ತಪಾಸಣೆಗಾಗಿ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ಡೆಂಗಿ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗವಿದ್ದು, ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಹಾವು ಕಡಿತ, ಸಾಂಕ್ರಾಮಿಕ ರೋಗಗಳಿಗೆ ಆಸ್ಪತ್ರೆಯಲ್ಲಿ ಅಗತ್ಯ ಔಷಧ ದಾಸ್ತಾನು ಇದೆ. ಹಳ್ಳಿಗಳಲ್ಲಿಯೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಇಳಿಮುಖವಾಗಿದ್ದರೂ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮನೆ ಮುಂದೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗದಂತೆ ಮುಂಜಾಗ್ರತೆ ವಹಿಸಬೇಕು.
–ಡಾ.ಅಶ್ವತ್ಥಬಾಬು ಡಿಎಚ್ಒ

ನಗರದಲ್ಲೇ ಹೆಚ್ಚಿದ್ದ ಡೆಂಗಿ ಪ್ರಕರಣ ಆರೋಗ್ಯ ಇಲಾಖೆ ಹಾಗೂ ನಗರಸಭೆ ಮನೆ ಮನೆ ಲಾರ್ವ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸಿದರೂ ಜನವರಿಯಿಂದ ಜುಲೈವರೆಗೆ ಗ್ರಾಮೀಣ ಪ್ರದೇಶಕ್ಕಿಂತ ನಗರದಲ್ಲಿಯೇ 144 ಡೆಂಗಿ ಪ್ರಕರಣಗಳು ಪತ್ತೆಯಾಗಿ ಆತಂಕಕ್ಕೆ ದೂಡಿತ್ತು. ನಗರದ ಗೌರಿಕಾಲುವೆ ತಮಿಳು ಕಾಲೋನಿ ಮಾರ್ಕೆಟ್ ರಸ್ತೆ 60 ಅಡಿ ರಸ್ತೆ ಕಲ್ಯಾಣನಗರದಲ್ಲಿ ಅಧಿಕ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ ಹೆಚ್ಚಳವಾಗಿತ್ತು. ಡೆಂಗಿ ಸಂಬಂಧಿತ ರೋಗಗಳಿಗೆ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನರ್ಸಿಂಗ್ ವಿದ್ಯಾರ್ಥಿಗಳು ಜೊತೆಗೂಡಿ ಮನೆಗಳಲ್ಲಿ ಲಾರ್ವ ಸಮೀಕ್ಷೆ ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದು ಆರೋಗ್ಯ ನಿರೀಕ್ಷಕ ಶ್ರೀಧರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.