ಕಡೂರು: ರೈತರಿಗೆ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತದೆ ಎಂದು ತರೀಕೆರೆ ಕೃಷಿ ಉಪನಿರ್ದೇಶಕಿ ಹಂಸವೇಣಿ ಹೇಳಿದರು.
ಕಡೂರು ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿ ಭಾಗ್ಯ, ಬೆಳೆ ವಿಮೆ, ಮತ್ತು ಬೆಳೆ ಸಮೀಕ್ಷೆ ಬಗ್ಗೆ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ರೈತರಲ್ಲಿ ಅರಿವು ಮೂಡಿಸಬೇಕು ಮತ್ತು ಈ ಯೋಜನೆಗಳ ಸಮರ್ಪಕ ಅನುಷ್ಟಾನವಾಗಬೇಕೆಂಬ ಉದ್ದೇಶದಿಂದ ಎನ್.ಐ.ಸಿ.( ನ್ಯಾಷನಲ್ ಇನಫರ್ಮೇಷನ್ ಸೆಂಟರ್) ಮೂಲಕ ರೈತರನ್ನು ಸಂಪರ್ಕಿಸಿ ನೇರವಾಗಿ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.26478 ರೈತರಿಗೆ ಮಾಹಿತಿ ನೀಡಲಾಯಿತು. 140 ರೈತರು ಕರೆ ಮಾಡಿ ಅನುಮಾನ ಪರಿಹರಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.
ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಎಂ.ಅಶೋಕ್ ಮಾತನಾಡಿ, ‘ಈ ಕಾರ್ಯಕ್ರಮದಲ್ಲಿ ಬಹುತೇಕ ರೈತರು ಕರೆ ಮಾಡಿ ತೆಂಗು, ಅಡಿಕೆ ವಿಮೆ ಬಗ್ಗೆ ಪ್ರಶ್ನೆ ಕೇಳಿದರು. ನಮ್ಮ ಇಲಾಖೆಯಲ್ಲದಿದ್ದರೂ ಅವರಿಗೂ ಸಮರ್ಪಕ ಮಾಹಿತಿ ನೀಡಲಾಗಿದೆ. ಬೀರೂರು, ಪಂಚನಹಳ್ಳಿ, ಸಿಂಗಟಗೆರೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿದ್ದರು. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಶೀಘ್ರದಲ್ಲೆ ಹೋಬಳಿ ಮಟ್ಟದಲ್ಲಿಯೂ ಈ ಫೋನ್ ಇನ್ ಕಾರ್ಯಕ್ರಮ ಏರ್ಪಡಿಲಾಗುತ್ತದೆ ಎಂದರು.
ಕಸಬಾ ಕೃಷಿ ಅಧಿಕಾರಿ ಡಾ.ಟಿ.ಸಿ.ಚಂದ್ರು, ತಾಂತ್ರಿಕ ಅಧಿಕಾರಿ ಹರೀಶ್ ಮತ್ತು ತಾಲ್ಲೂಕಿನ ಎಲ್ಲ ಹೋಬಳಿ ಕೃಷಿ ಅಧಿಕಾರಿಗಳು ಇದ್ದರು.
ಇಲಾಖೆಯಿಂದ ಫ್ರೂಟ್ಸ್ ಐಡಿ ಪಡೆದ ರೈತರಿಗೆ ಏಕಕಾಲದಲ್ಲಿ ಕರೆ ಮಾಡಿ ಅವರಿಗೆ ಕೃಷಿ ಇಲಾಖೆಯ ಸೌಲಭ್ಯಗಳು, ಷರತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. ಅದೇ ಸಮಯದಲ್ಲಿ ರೈತರೇ ಕರೆ ಮಾಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ಬೆಳಿಗ್ಗೆ 10-30 ರಿಂದ ಸಂಜೆ 4ರ ತನಕ ನಡೆದ ಫೋನ್ ಇನ್‌ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.