ಪ್ರಾತಿನಿಧಿಕ ಚಿತ್ರ
ಬಾಳೆಹೊನ್ನೂರು(ಚಿಕ್ಕಮಗಳೂರು ಜಿಲ್ಲೆ): ಧರ್ಮ ಕ್ಷೇತ್ರಗಳು ತಮ್ಮದೇ ಆದ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುತ್ತವೆ. ಅಂತಹ ಧರ್ಮ ಕ್ಷೇತ್ರಗಳಲ್ಲಿ ರಾಜಕೀಯವನ್ನು ಬೆರೆಸುವ ಕೆಲಸ ಯಾರೂ ಮಾಡಬಾರದು. ಅನಾವಶ್ಯಕವಾಗಿ ಧರ್ಮಸ್ಥಳದ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಭಕ್ತರ, ಸಮಾಜದ ಹಾಗೂ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಸನಾತನ ಧರ್ಮ ತೇಜೋವಧೆಗೆ ಕಾಣದ ಕೈಗಳು ಹುನ್ನಾರ ನಡೆಸಿವೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿ, ಕೇದಾರ ಭೀಮಾಶಂಕರ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ಕಾಶೀ ಪೀಠದ ಚಂದ್ರಶೇಖರ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು, ಕಳೆದ ಕೆಲ ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ಸಂಸ್ಥೆಯು ಮೇಲ್ನೋಟಕ್ಕೆ ಆರೋಪಿಗಳಾಗಿರುವವರ ವಿಚಾರಣೆ ನಡೆಸುತ್ತಿದ್ದು, ಈ ಒಟ್ಟಾರೆ ಪ್ರಕರಣದ ಹಿಂದಿನ ಸೂತ್ರಧಾರಿಗಳನ್ನು ಪತ್ತೆಹಚ್ಚಿ ಆದಷ್ಟು ಬೇಗ ಅವರಿಗೆ ಶಿಕ್ಷೆ ನೀಡುವಂತಾಗಬೇಕು. ನಾಡಿನಲ್ಲಿರುವ ಅನೇಕ ಮಠ-ಮಂದಿರಗಳು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಪ್ರಾಚೀನ ಕಾಲದಿಂದಲೂ ಕಾರ್ಯ ನಿರ್ವಹಿಸಿಕೊಂಡು ಬಂದಿವೆ. ಅಂತೆಯೇ ಧರ್ಮಸ್ಥಳ ಕ್ಷೇತ್ರ ಶತಮಾನಗಳ ಇತಿಹಾಸ ಹೊಂದಿದ್ದು ನಾಡಿಗೆ ವಿಶೇಷ ಕೊಡುಗೆ ನೀಡಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕಳೆದ 50 ವರ್ಷಗಳಿಂದ ಧರ್ಮ ಸಂಸ್ಕೃತಿ ಪುನರುತ್ಥಾನಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ಕ್ಷೇತ್ರದ ಮೇಲೆ ಬಂದಿರುವ ಆರೋಪಗಳು ಮುಕ್ತವಾಗಿ ಆದಷ್ಟು ಬೇಗ ಮೊದಲಿನಂತೆ ಎಲ್ಲ ಸಾಮಾಜಿಕ ಕಾರ್ಯಗಳು ಮುಂದುವರೆಯುವಂತಾಗಲಿ. ಹಿಂದೂ ಸಂಸ್ಕೃತಿಯ ಬಗ್ಗೆ ಇತ್ತೀಚಿಗೆ ಕೆಲ ನಾಸ್ತಿಕರು ಅಲ್ಲಲ್ಲಿ ವಾತಾವರಣ ಕಲುಷಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ ಅಂತವರನ್ನು ಗುರುತಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.